

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ: ಮಾಯಕೊಂಡ ಹೋಬಳಿಯ ಅನೇಕ ಗ್ರಾಮಗಳಲ್ಲಿ ರಾಗಿ, ಅವರೆ, ಅಲಸಂದೆ ಬೀಜ ಬಿತ್ತನೆ ಕಾರ್ಯ ಮತ್ತೆ ಬಿರುಸುಗೊಂಡಿದೆ. ಹೋಬಳಿಯ ಹುಚ್ಚವನಹಳ್ಳಿ, ಎಚ್. ಬಸವಾಪುರ, ಇಂಡಿಸಕಟ್ಟೆ, ಕ್ಯಾತನಹಳ್ಳಿ, ನಲ್ಕುಂದ, ಹೆದ್ನೆ- ರಾಂಪುರ, ಬುಳ್ಳಾಪುರ ಹಾಗೂ ಆನಗೋಡು, ದಾವಣಗೆರೆ ಕಸಬಾ ಹೋಬಳಿಗಳ ಹಲವು ಗ್ರಾಮಗಳ ರೈತರು ಬಿತ್ತನೆ ಮಾಡುತ್ತಿದ್ದಾರೆ.
ಮುಂಗಾರು ಹಂಗಾಮಿನ ಮೆಕ್ಕೆಜೋಳ ಬಿತ್ತನೆಗೆ ಸಕಾಲಕ್ಕೆ ಮಳೆ ಬಾರದೆ ಇದ್ದುದರಿಂದ ತಡವಾಗಿ ಬಿತ್ತನೆ ಮಾಡಲಾಯಿತು. ತಿಂಗಳುಗಟ್ಟಲೇ ಸುರಿದ ಜಿಟಿ ಮಳೆಗೆ ಮೆಕ್ಕೆಜೋಳ ತೇವಾಂಶ ಜಾಸ್ತಿಯಾಗಿ ಸಂಪೂರ್ಣ ಹಾಳಾಯಿತು. ಆದ್ದರಿಂದ ರೈತರು ರಾಗಿ, ಅವರೆ, ಅಲಸಂದೆ ಬಿತ್ತನೆಗೆ ಮುಂದಾಗಿದ್ದಾರೆ.
ಹಾಳಾಗಿ ಹೋಗಿರುವ ಮೆಕ್ಕೆಜೋಳ ಫಸಲನ್ನು ನಾಶಪಡಿಸಿ ಜಮೀನನ್ನು ಹದಗೊಳಿಸಿ ಮಾಡಿ ಅಲಸಂದೆ, ಅವರೆ, ರಾಗಿಯನ್ನು 25 ದಿನಗಳ ಹಿಂದೆ ಬಿತ್ತಿದ್ದೇವೆ. ದ್ವಿದಳ ಧಾನ್ಯಗಳಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ಎಚ್. ಬಸವಾಪುರದ ರೈತ ನಾಗರಾಜ್.
ಮಾಯಕೊಂಡ, ಆನಗೋಡು, ದಾವಣಗೆರೆ ಕಸಬಾ ಹೋಬಳಿಗಳಲ್ಲಿ ಮುಂಗಾರು ಹಂಗಾಮಿನಲ್ಲಿ 1150 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 464 ಹೆ. ಅಲಸಂದೆ ಹಾಗೂ 500 ಹೆ. ಅವರೆ ಬಿತ್ತನೆ ಮಾಡಲಾಗಿದೆ.
ರೈತ ಕೇಂದ್ರಗಳಲ್ಲಿ ಅಗತ್ಯ ಮಾಹಿತಿ: ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಿ ರೈತರು ರಾಗಿಯ ನಡುವೆ ಮಿಶ್ರ ಮತ್ತು ಅಕ್ಕಡಿ ಬೆಳೆಯಾಗಿ ಅಲಸಂದೆ ಬಿತ್ತನೆ ಮಾಡಬೇಕು. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲೂ ಲಘು ಪೋಷಕಾಂಶಗಳ ದ್ರಾವಣ ಸಿಗುತ್ತದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಮಾಹಿತಿ ಪಡೆಯಬೇಕು ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಿ.ಎಂ.ಶ್ರೀಧರಮೂರ್ತಿ ಮಾಹಿತಿ ನೀಡಿದರು.
ಅಕ್ಟೋಬರ್ 1ರಿಂದ ಹಿಂಗಾರು ಬಿತ್ತನೆ ಆರಂಭವಾಗುತ್ತದೆ. ಹಿಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ 900 ಹೆಕ್ಟೇರ್ ರಾಗಿ ಮತ್ತು 550 ಹೆಕ್ಟೇರ್ ಅಲಸಂದೆ ಬಿತ್ತನೆ ಮಾಡಲಾಗುತ್ತದೆ. ಈಗಾಗಲೇ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೂ ಅಲಸಂದೆ ಬಿತ್ತನೆ ಬೀಜ ದಾಸ್ತಾನು ಮಾಡಿದ್ದು, ರಾಗಿ ಬಿತ್ತನೆ ಬೀಜವು ಒಂದೆರಡು ದಿನಗಳಲ್ಲಿ ರೈತ ಸಂಪರ್ಕ ಕೇಂದ್ರಗಳಿಗೆ ಬರುತ್ತದೆ.
I ಡಿ.ಎಂ. ಶ್ರೀಧರಮೂರ್ತಿ, ತಾಲೂಕು ಕೃಷಿ ಸಹಾಯಕ ನಿರ್ದೇಶಕ.
ಎರಡುವರೆ ತಿಂಗಳ ಹಿಂದೆ ಆರೂವರೆ ಎಕರೆ ಜಮೀನಿಗೆ ಸಣ್ಣ ಅವರೆ (ಮಣಿ ಅವರೆ) ಬಿತ್ತನೆ ಮಾಡಿದ್ದೆನು. ಅವರೆ ಬಳ್ಳಿ ಉತ್ತಮವಾಗಿದ್ದು, ಹೂವು ಬಿಡುವ ಹಂತಕ್ಕೆ ಬಂದಿದೆ. ದೀಪಾವಳಿ ಹಬ್ಬದ ವೇಳೆಗೆ ಫಸಲು ಬರುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ.
I ಸೈಯದ್ ಬುಡನ್, ಹುಚ್ಚವನಹಳ್ಳಿ ಗ್ರಾಮದ ರೈತ.