

ಅಮರೇಶ ಚಿಲ್ಕರಾಗಿ ದೇವದುರ್ಗ
ಜೂನ್ ಮೊದಲ ವಾರದಲ್ಲಿ ತಾಲೂಕಿನಲ್ಲಿ ಬಿದ್ದ ಮುಂಗಾರು ಮಳೆ ನಂಬಿಕೊಂಡು ರೈತರು ಬಿತ್ತನೆ ಮಾಡಿದ ಹತ್ತಿ, ತೊಗರಿ, ಸಜ್ಜೆ, ಸೂರ್ಯಕಾಂತಿ ಬೆಳೆಗೆ ನೀರಿನ ಕೊರತೆ ಎದುರಾಗಿದೆ. 15ದಿನ ಕಳೆದರೂ ಮಳೆ ಬಾರದೆ ರೈತರು ಬೆಳೆ ಉಳಿಸಿಕೊಳ್ಳಲು ನಾನಾ ಸರ್ಕಸ್ ನಡೆಸಲು ಮುಂದಾಗಿದ್ದಾರೆ.
ಜಾಲಹಳ್ಳಿ ಹೋಬಳಿಯ ಪಲಕಮರಡಿ, ಮದರಕಲ್ ಗ್ರಾಪಂ ಅರಕೇರಾ ಹಾಗೂ ಗಬ್ಬೂರು ಹೋಬಳಿಯ ಕೆಲ ಭಾಗದ ರೈತರು ಮಳೆ ನಂಬಿಕೊಂಡು ಮುಂಗಾರು ಬಿತ್ತನೆ ಮಾಡಿದ್ದಾರೆ.
ನಾರಾಯಣಪುರ ಬಲದಂಡೆ ನಾಲೆ ನೀರಿನ ಸೌಲಭ್ಯ ವಂಚಿತ ರೈತರಿಗೆ ಮಳೆ, ಬಾವಿ, ಬೋರ್‌ವೆಲ್ ನೀರೇ ಆಸರೆಯಾಗಿದೆ. ಬಿತ್ತನೆ ಮಾಡಿ 15-20ದಿನ ಕಳೆದರೂ ಮಳೆ ಬಾರದೆ ನಾಟಿದ ಬೆಳೆ ಉಳಿಸಿಕೊಳ್ಳಲು ರೈತರು ಹನಿ ನೀರಾವರಿ, ತುಂತುರು ನೀರಾವರಿ, ಹರಿ ನೀರಾವರಿಗೆ ಮೊರೆ ಹೋಗಿದ್ದಾರೆ.
ಅಮರಾಪುರ, ಮುಂಡರಗಿ, ದೇವತಗಲ್, ಗಲಗ, ದೇವರಗುಡ್ಡ, ಮದರಕಲ್, ಪಲಕನಮರಡಿ, ಊಟಿ, ವಂದಲಿ, ಬಿ.ಗಣೇಕಲ್, ನಾಗಡದಿನ್ನಿ, ಯಮನೂರು, ಕೊತ್ತದೊಡ್ಡಿ , ಗಬ್ಬೂರು ಹೋಬಳಿಯ ಹಲವು ಗ್ರಾಮಗಳ ರೈತರು ಮುಂಗಾರು ಮಳೆ ನಂಬಿ ಹತ್ತಿ, ತೊಗರಿ, ಸೂರ್ಯಕಾಂತಿ, ಸಜ್ಜೆ ಬಿತ್ತನೆ ಮಾಡಿದ್ದಾರೆ. ಸದ್ಯ ಬಿತ್ತನೆ ಮಾಡಿದ ಬೆಳೆಗಳು ಮೊಳಕೆ ಒಡೆದಿದ್ದು, ಮಳೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿವೆ. ಮುಂಗಾರು ಕೈಕೊಟ್ಟಿದ್ದರಿಂದ ಹತ್ತಿ ಬೆಳೆಗಳು ಒಣಗುತ್ತಿವೆ.
ಬೋರ್‌ವೆಲ್, ಬಾವಿ, ಹಳ್ಳದ ನೀರು ಸೌಲಭ್ಯವಿರುವ ರೈತರು ಪಂಪ್‌ಸೆಟ್ ಮೂಲಕ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ವಿಪರೀತ ಗಾಳಿಗೆ ವಿದ್ಯುತ್ ಕೈ ಕೊಡುತ್ತಿದ್ದು ದಿನಕ್ಕೆ ಒಂದು ಎಕರೆ ನೀರು ಉಣಿಸುವುದು ಕಷ್ಟವಾಗಿದೆ. ಒಂದೆಡೆ ಮಳೆ, ಇನ್ನೊಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆ ರೈತರ ನಿದ್ದೆಗೆಡಿಸಿದೆ.
ಮುಂಗಾರು ಹಂಗಾಮು ನಂಬಿಕೊಂಡು ತಾಲೂಕಿನಲ್ಲಿ ರೈತರು ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಇದು ಒಣ ಬೇಸಾಯ ಪದ್ಧತಿಯ ಅರ್ಧದಷ್ಟು ಜಮೀನು ಎಂದು ಅಂದಾಜಿಸಲಾಗಿದೆ. ಉಳಿದಂತೆ ಭತ್ತ 29,400 ಹೆಕ್ಟೇರ್, ಸಜ್ಜೆ 1,077 ಹೆಕ್ಟೇರ್, ತೊಗರಿ 5,597 ಹೇಕ್ಟೇರ್, ಶೇಂಗಾ 348 ಹೆಕ್ಟೇರ್, 396 ಸೂರ್ಯಕಾಂತಿ, ಹತ್ತಿ 74,150 ಹೆಕ್ಟೇರ್ ಒಟ್ಟು 1,11,204 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.
ಶೇ.80ಕ್ಕೂ ಹೆಚ್ಚು ಪ್ರದೇಶ ನೀರಾವರಿಗೆ ಒಳಪಟ್ಟಿದ್ದು, ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾನದಿಗೆ ನೀರು ಬಿಡುಗಡೆ ಮಾಡಿದಾಗ ಬಿತ್ತನೆಯಾಗಲಿದೆ. ಉಳಿದ ಶೇ.20 ಖುಷ್ಕಿ ಭೂಮಿಯಾಗಿದ್ದು ಮಳೆಯನ್ನು ಅವಲಂಬಿಸಿದೆ. ಈ ಭೂಮಿಯಲ್ಲಿ ಬಹುತೇಕ ರೈತರು ಬಿತ್ತನೆ ಮಾಡಿದ್ದಾರೆ.
ಜೂನ್ ಆರಂಭದಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆ ನಂಬಿಕೊಂಡು ಖುಷ್ಕಿ ಪ್ರದೇಶದ ರೈತರು ಹತ್ತಿ, ತೊಗರಿ, ಸಜ್ಜೆ ಇತರ ಬೆಳೆ ಬಿತ್ತನೆ ಮಾಡಿದ್ದಾರೆ. ಆ ಬೆಳೆಗಳಿಗೆ ಸದ್ಯ ನೀರು ಬೇಕಿದೆ. 20 ದಿನಗಳಿಂದ ಮಳೆಯಾಗಿಲ್ಲ. ವಾರದಲ್ಲಿ ಮಳೆ ಬಾರದಿದ್ದರೆ ಬೆಳೆ ಹಾಳಾಗಲಿವೆ.ಬಸವರಾಜ ಸಿದ್ದರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಒಂದು ಎಕೆರೆಗೆ 3 ಪ್ಯಾಕೆಟ್‌ನಂತೆ ಹತ್ತಿ ಬೀಜ ನಾಟಿ ಮಾಡಲಾಗಿದೆ. ಒಂದು ಪ್ಯಾಕೆಟ್ 1250 ರೂ ಇದೆ. ಗಳೆವು 1500 ರೂ. ಬೀಜ ನಾಟಿ ಮಾಡಲು ಮಹಿಳಾ ಕೂಲಿಕಾರರಿಗೆ 300ರೂ. ಒಟ್ಟು ಎಕರೆ ಕನಿಷ್ಠ 8-10ಸಾವಿರ ರೂ. ಖರ್ಚು ಮಾಡಲಾಗಿದೆ. ಮಳೆ ಕೈ ಕೊಟ್ಟರೆ ರೈತನ ಬದುಕು ಕಷ್ಟವಾಗಲಿದೆ.ದೇವಣ್ಣ , ಕರ್ಕಿಹಳ್ಳಿ ರೈತ