ಅಂತೂ ಇಂತೂ ಬಿತ್ತನೆ ಪೂರ್ಣ

17 ಎಸ್ಕೆಪಿ_1b
ಶಿಕಾರಿಪುರ ತಾಲೂಕಿನಲ್ಲಿ ಹುಲುಸಾಗಿ ಬೆಳೆ ಮುಸುಕಿನ ಜೋಳ.
Published on

ಶಿಕಾರಿಪುರ: ತಾಲೂಕಿನಲ್ಲಿ ಕಳೆದ ವರ್ಷದ ಜೂನ್, ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷ ವಾಡಿಕೆ ಮಳೆ 278 ಮಿಮೀ ಮಳೆಗೆ ಕೇವಲ 138 ಮಳೆಯಾಗಿದ್ದು ಜುಲೈ ಒಂದರಿಂದ ಇಲ್ಲಿಯವರೆಗೆ 132 ವಾಡಿಕೆ ಮಳೆಗೆ ಕೇವಲ 103 ಮಿಮಿ ಮಳೆಯಾಗಿದೆ.
ಬಹುತೇಕ ರೈತರು ತಾಲೂಕಿನಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಆದರೆ ಭತ್ತದ ಸಸಿಮಡಿ ಕಾರ್ಯ ಮುಗಿದು ಭತ್ತದ ನಾಟಿ ಮಾಡಲು ಸಾಕಷ್ಟು ಮಳೆಯ ಅಗತ್ಯ ಕಂಡು ಬರುತ್ತಿದೆ. ಕಳೆದ ವರ್ಷ ಈ ಸಮಯಕ್ಕೆ ತಾಲೂಕಿನ ಜೀವಜಲವಾಗಿರುವ ಅಂಜನಾಪುರ ಮತ್ತು ಅಂಬ್ಲಿಗೊಳ ಜಲಾಶಯಗಳು ತುಂಬಿ ಕೋಡಿ ಬಿದ್ದಿದ್ದರಿಂದ ಅಂಜನಾಪುರ, ಕಸಬಾ ಹೋಬಳಿಗಳ ಮಳೆಯಾಶ್ರಿತ ರೈತರಿಗೆ ಜಲಾಶಗಳಿಂದ ಬಿಡುವ ನೀರು ವರದಾನವಾಗುತ್ತಿತ್ತು. ಆದರೆ ಈ ವರ್ಷ ಎರಡೂ ಜಲಾಶಯಗಳಲ್ಲಿ ಕೇವಲ 5 ಅಡಿ ನೀರು ಬಂದಿದೆ. ಇದರಿಂದ ಈ ಭಾಗದ ರೈತರಿಗೆ ಭತ್ತದ ನಾಟಿ ಮಾಡಲು ತೊಂದರೆ ಆಗುವುದು ನಿಶ್ಚಿತ.
ಈ ನಡುವೆ ಮುಸುಕಿನಜೋಳಕ್ಕೆ ಲದ್ದಿ ಹುಳುಕಾಟ ಪ್ರಾರಂಭವಾಗಿದೆ. ಹಿಂಡುಗಟ್ಟಲೆ ಬರುವ ಇವುಗಳನ್ನು ರೈತರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಬಾರದಂತೆ ತಡೆಯುವುದು ಒಳ್ಳೆಯದು. ತಾಲೂಕಿನ ಹೊಸೂರು ಹೋಬಳಿಯಲ್ಲಿ ಸುಮಾರು 2 ಸಾವಿರದಿಂದ 2,500 ಹೆಕ್ಟೇರ್ ಪ್ರದೇಶದಲ್ಲಿ ಲದ್ದಿ ಹುಳು ಬಾಧೆ ಕಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net