ಕೈಕೊಟ್ಟ ವರುಣ ಬಾಡುತ್ತಿರುವ ಬೆಳೆ

mkg
Published on

ಚನ್ನಗಿರಿ: ಪ್ರಸ್ತುತ ವರ್ಷ ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬಾರದ ಪರಿಣಾಮ ಕೃಷಿ ಬೆಳೆಗಳು ಸಂಪೂರ್ಣ ಬಾಡುತ್ತಿದ್ದು, ರೈತರು ಕಂಗಾಲಾಗಿ ಮೋಡದತ್ತ ಕಣ್ಣು ನೆಟ್ಟಿದ್ದಾರೆ.

ತಾಲೂಕಿನಲ್ಲಿ ಆ.31ರ ವರೆಗೆ 537 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಈವರೆಗೆ ಶೇ. 38 ಮಿ.ಮೀ ರಷ್ಟು ಮಾತ್ರ ಮಳೆಯಾಗಿರುವ ಪರಿಣಾಮ ಮೆಕ್ಕೆಜೋಳ, ರಾಗಿ, ಹತ್ತಿ, ತೊಗರಿ ಬೆಳೆಗಳು ಬಿಸಿಲಿನ ತಾಪಕ್ಕೆ ಬಾಡುತ್ತಿವೆ. ಇನ್ನೊಂದು ವಾರದಲ್ಲಿ ಮಳೆ ಸುರಿಯದಿದ್ದರೆ ಬೆಳೆ ನೆಲಕಚ್ಚುವುದು ನಿಶ್ಚಿತ.

ಆಗಾಗ ಮೋಡ ಕವಿದು ಬರುತ್ತಿರುವ ತುಂತುರು ಮಳೆ ಬೆಳೆಗಳಿಗೆ ಎಳ್ಳಷ್ಟೂ ಸಾಕಾಗುತ್ತಿಲ್ಲ. ಇದರಿಂದ ರೈತಾಪಿ ವರ್ಗ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಕೆಲವರು ಬೋರ್‌ವೆಲ್ ಮೂಲಕ ನೀರು ಹಾಯಿಸಿದರೆ, ಮತ್ತೆ ಕೆಲವರು ಕೆರೆ, ಹಳ್ಳಕೊಳ್ಳಗಳಿಂದ ನೀರು ಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ, ಈ ಬಾರಿ ಬೆಳೆ ಕೈ ಸಿಗುವುದು ಅನುಮಾನ.

ತಾಲೂಕಿನಲ್ಲಿ ಒಟ್ಟು 40 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ರೈತರು ಕೃಷಿ ಚಟುವಟಿಕೆ ನಡೆಸುತ್ತಿದ್ದು, ಪ್ರಮುಖ ಬೆಳೆಯಾದ ಮೆಕ್ಕೆಜೋಳ 23 ಸಾವಿರ ಹೆಕ್ಟರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

11 ಸಾವಿರ ಹೆ. ಪ್ರದೇಶದಲ್ಲಿ ಭತ್ತ, 4100 ಸಾವಿರ ಹೆ. ಪ್ರದೇಶದಲ್ಲಿ ರಾಗಿ, 2 ಸಾವಿರ ಹೆ. ಹಲಸಂದೆ, 1000 ಸಾವಿರ ಹೆ. ತೊಗರಿ ಬೆಳೆ ಸೇರಿದಂತೆ ಮತ್ತಿತರ ಬೆಳೆ ಬೆಳೆಯಲಾಗುತ್ತಿದೆ.

ಪ್ರತಿ ಎಕರೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕಳೆ ನಾಶಕ, ಕೂಲಿ ಮತ್ತಿತರ ಖರ್ಚು ಸೇರಿ ಸುಮಾರು 17 ಸಾವಿರ ರೂ. ವೆಚ್ಚವಾಗುತ್ತಿದೆ. ಆದರೆ, ಮಳೆಯ ಅಭಾವದಿಂದ ಹಾಕಿದ ಬಂಡವಾಳವು ಬರುವುದು ಕಷ್ಟ ಎನ್ನುತ್ತಾರೆ ರೈತರು.

ಮುಂಗಾರು ಸರಿಯಾದ ಸಮಯದಲ್ಲಿ ಆಗದಿದ್ದರಿಂದ ರೈತರು ಜೂನ್ ಹಾಗೂ ಜುಲೈ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದರು. ಆದರೆ, ಅಗಸ್ಟ್ಟ್ ತಿಂಗಳಲ್ಲಿ ಮಳೆ ಬಾರದೆ ಬಿತ್ತನೆ ಮಾಡಿದ ಬಹುತೇಕ ಮೆಕ್ಕೆಜೋಳ ನಾಶವಾಗುತ್ತಿದೆ. ಈ ವಾರದಲ್ಲಿ ಮಳೆ ಬರುವ ನಿರೀಕ್ಷೆ ಇದೆ.
ಅರುಣ್ ಗುನ್ನಾ, ಕೃಷಿ ಇಲಾಖೆ ತಾಲೂಕು ನಿರ್ದೇಶಕ.


ಸಾಲಸೋಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದೇವೆ. ಆದರೆ, ಮಳೆ ಸಕಾಲಕ್ಕೆ ಬಾರದೆ ಬೆಳೆ ಬಾಡುತ್ತಿದೆ. ಪ್ರತಿ ಬಾರಿ ಅತಿವೃಷ್ಟಿ, ಅನಾವೃಷ್ಟಿ, ಬೆಳೆಹಾನಿ, ಬೆಲೆ ಕುಸಿತ ಮತ್ತಿತರ ಕಾರಣಗಳಿಂದ ಹಾಕಿದ ಬಂಡವಾಳವೂ ಕೈಗೆ ಸಿಗುತ್ತಿಲ್ಲ. ರೈತಾಪಿ ಜೀವನ ಬೇಸರ ತರಿಸಿದೆ.
ನಿಜಗುಣ, ಹೊನ್ನೇಬಾಗಿ ಗ್ರಾಮದ ರೈತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net