

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಜಮಾವಣೆಯಾಗುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಕರೊನಾ ಸೋಂಕು ಹರಡುತ್ತಿದ್ದು, ರೈತರಿಗೆ ಸೋಂಕು ಬರುವುದನ್ನು ತಪ್ಪಿಸಲು ಕೃಷಿ ಇಲಾಖೆ ತಾತ್ಕಾಲಿಕ ಸಂಪರ್ಕ ಕೇಂದ್ರಗಳನ್ನು ತೆರೆದು ಬಿತ್ತನೆ ಬೀಜ ಪೂರೈಕೆ ಮಾಡುತ್ತಿದೆ.
ಉತ್ತರ ಕರ್ನಾಟಕದ ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೀದರ್, ಬೆಳಗಾವಿ, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಕೆಲವಡೆ ಬಿತ್ತನೆ ಬೀಜ ಪಡೆಯಲು ರೈತರು ಪಹಣಿ ಹಿಡಿದು ನೂಕುನುಗ್ಗಲು ಆರಂಭಿಸಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ಸರತಿ ಸಾಲಿನಲ್ಲಿ ನಿಂತುಕೊಂಡರೆ ಸೋಂಕು ಹರಡುವ ಸಾಧ್ಯತೆಗಳಿವೆ. ಹೀಗಾಗಿ ಸೋಂಕು ತಡೆಯುವ ಹಾಗೂ ಎಲ್ಲ ರೈತರಿಗೂ ಅಗತ್ಯ ವೇಳೆಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಲು ಹೆಚ್ಚುವರಿ ತಾತ್ಕಾಲಿಕ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಎಲ್ಲಿವೆ ಹೆಚ್ಚುವರಿ ಕೇಂದ್ರಗಳು?: ರಾಜ್ಯದಲ್ಲಿ 742 ರೈತ ಸಂಪರ್ಕ ಕೇಂದ್ರಗಳಿದ್ದು, ಅದರ ಮೂಲಕ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ಮೇ ಕೊನೆ ವಾರ, ಜೂನ್ ಮತ್ತು ಜುಲೈನ 15 ದಿನಗಳು ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆಯಿರುತ್ತದೆ. ಹೀಗಾಗಿ ಹೋಬಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ತಾತ್ಕಾಲಿಕ ಕೇಂದ್ರಗಳನ್ನು ತೆರೆದು ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸ ಗೊಬ್ಬರ ಸಾಕಷ್ಟು ಲಭ್ಯವಿದೆ. ಬೀಜ ಪೂರೈಕೆಗೆ ರೈತ ಸಂಪರ್ಕ ಕೇಂದ್ರಗಳ ಹೊರತಾಗಿ, ಹೆಚ್ಚುವರಿ ಕೇಂದ್ರಗಳನ್ನು ಆರಂಭಿ ಸಲು ಅನುಮತಿ ನೀಡಲಾಗಿದೆ. ರೈತರು ಆತಂಕಕ್ಕೆ ಒಳಗಾಗಬಾರರು. | ಬಿ.ವೈ.ಶ್ರೀನಿವಾಸ್ ಕೃಷಿ ಇಲಾಖೆ ನಿರ್ದೇಶಕ
73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
ರಾಜ್ಯಾದ್ಯಂತ ಮುಂಗಾರು ಮಳೆ ಆರಂಭವಾಗಿದೆ. ಅದಕ್ಕೆ ತಕ್ಕಂತೆ ರಾಜ್ಯ ಕೃಷಿ ಇಲಾಖೆ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಅದಕ್ಕೆ ಅಗತ್ಯವಾದ 5.97 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳು ಹಾಗೂ 22.10 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಯೋಜನೆ ರೂಪಿಸಿದೆ. ಮುಂಗಾರು ಪೂರ್ವದಲ್ಲಿ ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ತುಮಕೂರು, ಚಾಮರಾಜನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿತ್ತನೆ ಆರಂಭವಾಗಿದೆ.
ಗೊಂದಲ ಬೇಡ
ರೈತ ಸಂಪರ್ಕ ಕೇಂದ್ರಗಳಲ್ಲಿ ಸ್ಥಳದ ಕೊರತೆಯಿದೆ. ಇರುವಷ್ಟು ಸ್ಥಳದಲ್ಲೇ ಬೀಜಗಳ ದಾಸ್ತಾನು ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ. ರೈತರ ಬೇಡಿಕೆಗೆ ತಕ್ಕಂತೆ ಬೀಜ, ರಸಗೊಬ್ಬರ ಪೂರೈಸ ಲಾಗುತ್ತಿದ್ದು, ಖಾಲಿಯಾದಂತೆ ಉಗ್ರಾಣ ಗಳಿಂದ ಸರಬರಾಜು ಮಾಡಲಾಗುತ್ತದೆ. ಸರಬರಾಜು ವೇಳೆ ಕೊಂಚ ವ್ಯತ್ಯಯವಾಗುವ ಸಾಧ್ಯತೆಗಳಿದ್ದು, ರೈತರು ಆತಂಕಗೊಂಡು ಗೊಂದಲ ಸೃಷ್ಟಿಸದೆ 1-2 ದಿನಗಳಲ್ಲಿ ಕೇಂದ್ರಕ್ಕೆ ಆಗಮಿಸಿ ಬಿತ್ತನೆ ಬೀಜ ಪಡೆಯುವಂತೆ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನೆ ಬಾಗಿಲಿಗೆ ಬೀಜ ಪೂರೈಕೆ
ಬೀದರ್ ತಾಲೂಕಿನ ದಾಬಕಾದಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಮೇಶ್ ಪಾಟೀಲ್ ಗ್ರಾಮಸ್ಥರ ಸಹಯೋಗದೊಂದಿಗೆ ಬೀಜದ ಅವಶ್ಯಕತೆಯನ್ನು ಪಟ್ಟಿ ಮಾಡಿ ಅವರ ಮನೆ ಬಾಗಿಲಿಗೆ ಬೀಜ ಪೂರೈಕೆ ಮಾಡಿದ್ದಾರೆ. ಇನ್ನು ಮಂಡ್ಯ ಜಿಲ್ಲೆಯಲ್ಲಿ ಕರೊನಾ ಇರುವುದರಿಂದ, ಗ್ರಾಮೀಣ ಪ್ರದೇಶಗಳಿಗೆ ವಾಹನಗಳಲ್ಲಿ ಹೋಗಿ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ. ಜತೆಗೆ ಆಯಾ ಜಿಲ್ಲೆಗಳ ರಾಜಕೀಯ ಮುಖಂಡರು ತಾತ್ಕಾಲಿಕ ಕೇಂದ್ರಗಳನ್ನು ತೆರೆದು ಬೀಜ ಮಾರಾಟ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
| ಸತೀಶ್ ಕೆ.ಬಳ್ಳಾರಿ