ಬಿತ್ತಿದ ಸೋಯಾ ಮೊಳಕೆಯೊಡೆದಿಲ್ಲ!

7KITTUR1
Published on

ಚನ್ನಮ್ಮನ ಕಿತ್ತೂರು: ಬೈಲಹೊಂಗಲ ತಾಲೂಕಿನ ತುರುಕರ ಶೀಗಿಹಳ್ಳಿ ಗ್ರಾಮದ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರಿ ಸಂಘದಿಂದ ವಿತರಿಸಲಾದ ಸೋಯಾಬೀನ್ ಬಿತ್ತನೆ ಬೀಜ ಕಳಪೆಯಾಗಿದ್ದು, ತಿಂಗಳು ಕಳೆದರೂ ಮೊಳಕೆಯೊಡೆಯದೆ ಪರಿತಪಿಸುವಂತಾಗಿದೆ.

ವರುಣ 726, ವರುಣ-34, ಕೆಡಿಎಸ್-34, ಕೆಡಿಎಸ್ 26, ಾರ್ಮ ಸೋನಾ ಕಂಪನಿಯ ಬಿತ್ತನೆ ಬೀಜಗಳು ನಮಗೆ ನಷ್ಟವನ್ನುಉಂಟು ಮಾಡಿದ್ದು, ಪರಿಹಾರ ತುಂಬಿಕೊಡುವಂತೆ ತುರಕರ ಶೀಗಿಹಳ್ಳಿ, ಮೆಟ್ಯಾಲ, ಕಡಸಗಟ್ಟಿ, ಬೆಳಿಕಟ್ಟಿ ಗ್ರಾಮಗಳ ರೈತರು ಆರೋಪಿಸಿ ಶೀಗಿಹಳ್ಳಿ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರಿ ಸಂಘದ ಕಾರ್ಯದರ್ಶಿ ಬಸವರಾಜ ಕಲಬಾವಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ತುರಕರ ಶೀಗಿಹಳ್ಳಿ, ಮೆಟ್ಯಾಲ, ಕಡಸಗಟ್ಟಿ, ಬೆಳಿಕಟ್ಟಿ ಗ್ರಾಮಗಳ ಸುಮಾರು ಎರಡೂವರೆ ಸಾವಿರ ಎಕರೆ ಭೂಮಿಯಲ್ಲಿ ರಾಷ್ಟ್ರೀಯ ಬೀಜ ನಿಗಮ ಬಿಡುಗಡೆ ಮಾಡಿದ ಕಷಿ ಇಲಾಖೆಯಿಂದ ವಿತರಿಸಲಾದ ಸೋಯಾಬೀನ್ ಬೀಜಗಳನ್ನು ಬಿತ್ತನೆ ಮಾಡಲಾಗಿದ್ದು, ಎಕರೆಗೆ 20 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ. ಈಗ ದಿಕ್ಕು ತೋಚದಂತಾಗಿದೆ. ಮರು ಬಿತ್ತನೆ ಮಾಡಲು ದುಡ್ಡು ಇಲ್ಲದಂತಾಗಿದೆ. ಕೈಗಡ ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ.

ಬೆಳೆ ಬಂದ ನಂತರ ಸಾಲ ತೀರಿಸಬಹುದು ಎಂಬ ನಂಬಿಕೆ ಇಟ್ಟುಕೊಂಡಿದ್ದೇವು. ಈಗ ಬಿತ್ತನೆ ಬೀಜಗಳು ಹುಸಿ ಹೋಗಿರುವುದರಿಂದ ಏನು ಮಾಡಬೇಕು ಎಂಬುದು ತೋಚದಂತಾಗಿದೆ. ಕಷಿ ಇಲಾಖೆಯ ಅಧಿಕಾರಿಗಳು ಬೀಜ ವಿತರಿಸುವ ಮುನ್ನ ಪರಿಶೀಲಿಸಬೇಕಾಗಿತ್ತು. ಕಳಪೆ ಬೀಜ ನೀಡಿರುವ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ನಕಲಿ ಕಂಪನಿಗಳನ್ನು ಗುರುತಿಸಿ ಸರಿಯಾದ ಶಿಕ್ಷೆ ನೀಡಬೇಕು. ಪ್ರತಿವರ್ಷ ಹೊಸ ಹೊಸ ಕಂಪನಿಗಳು ಬೇರೆ ಹೆಸರುಗಳಿಂದ ಬೀಜ ವಿತರಣೆ ಮಾಡಿ ರೈತರಿಗೆ ಮೋಸ ಮಾಡುತ್ತಿವೆ.

ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಕೂಡಲೇ ಕಷಿ ಇಲಾಖೆ ಹಾಗೂ ಸರ್ಕಾರ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ರೈತರಾದ ಬಸವರಾಜ ಸುಬೇದಾರ, ಪ್ರಕಾಶ ಶಿಂತ್ರಿ, ಯಲ್ಲಪ್ಪ ಅಬ್ಬಾರ, ಬಸವರಾಜ ಶಿಂತ್ರಿ, ನಾಗನಗೌಡ ಪಾಟೀಲ, ಸೋಮೇಶ ಮರತಮ್ಮನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net