

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ರೈತರು ತ್ವರಿತವಾಗಿ ಬಿತ್ತನೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ. 70ರಿಂದ 80ರಷ್ಟು ಬಿತ್ತನೆಯಾಗಿದೆ. ಹೀಗಾಗಿ ರೈತರಿಗೆ ಯಾವುದೇ ರೀತಿಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಶಾಸಕ ಎಂ.ಆರ್. ಪಾಟೀಲ ಸೂಚಿಸಿದರು.
ನಗರದ ತಾಲೂಕು ಆಡಳಿತ ಸೌಧದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕುಂದಗೋಳ ಮತಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ)ಯಲ್ಲಿ ಅವರು ಮಾತನಾಡಿದರು.
ರೈತರಿಗೆ ಉತ್ತಮ ಬೀಜ ದೊರೆಯದಿದ್ದಾಗ ಪುನಃ ಖರೀದಿಸಲು ಮುಂದಾಗುತ್ತಾರೆ. ಆದರೆ ಎಫ್‌ಐಡಿ ಮೂಲಕ ಈ ಮೊದಲೇ ಬಿತ್ತನೆ ಬೀಜ ಖರೀದಿ ಮಾಡಿದ್ದರಿಂದ ಮರಳಿ ಬೀಜ ಖರೀದಿಸಲು ಬರುವುದಿಲ್ಲ. ಹೀಗಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಜೊತೆ ಮಾತಾಡಿ ಈ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇನೆ. ಎಫ್‌ಐಡಿ ಮೂಲಕ ಬಿತ್ತನೆ ಬೀಜ ಖರೀದಿ ಮಾಡುವಂತೆ ಮಾಡಿರುವುದು ಎಲ್ಲ ರೈತರಿಗೂ ಅನುಕೂಲವಾಗಲಿ ಎಂಬ ಉದ್ದೇಶವನ್ನು ಸರ್ಕಾರ ಹೊಂದಿದೆ. ಅಲ್ಲದೇ ಮಧ್ಯವರ್ತಿಗಳಿಂದ ರೈತರಿಗೆ ಮೋಸ ಆಗಬಾರದೆಂಬುದಿದೆ. ಸರಿಯಾಗಿ ಬಿತ್ತನೆಯಾಗದಿರುವುದರ ಬಗ್ಗೆ ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಹೊಸದಾಗಿ ವಸತಿ ನಿಲಯಗಳಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ವೆಬ್‌ಸೈಟ್ ತೆರೆದಿಲ್ಲ. ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರವೇಶ ದೊರೆಯಬೇಕು. ಈ ಕುರಿತು ಅಧಿವೇಶನದಲ್ಲಿ ಪ್ರಶ್ನೆ ಮಾಡಿದ್ದೆ. ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರ ಜೊತೆಗೆ ಈ ವಿಷಯದ ಕುರಿತು ಮಾತನಾಡಿದ್ದೇನೆ ಎಂದು ಶಾಸಕರು ಸಭೆಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಸರಿಯಾಗಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ಕುರಿತು ಎಲ್ಆ್ಯಂಡ್ ಟಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಸ್ಮಶಾನ, ರಸ್ತೆ ಬದಿಗಳಲ್ಲಿ ಬೇಗನೆ ಬೆಳೆಯುವ ಸಸಿಗಳನ್ನು ನೆಡಬೇಕು. ಅವುಗಳಿಗೆ ಮುಳ್ಳು ಬೇಲಿ ಹಾಕಿಸುವುದು ಸೂಕ್ತ. ಪಡಿತರ ಚೀಟಿಯಲ್ಲಿನ ತಿದ್ದುಪಡಿಯನ್ನು ಆದಷ್ಟು ಬೇಗ ಮಾಡಿ ಕೊಡಬೇಕು. ಶಾಲೆ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡಬಾರದು. ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಬೇಕು. ಡೆಂೆ, ಮಲೇರಿಯಾ, ಕ್ಷಯ ರೋಗ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಬೇಕಿದೆ. ಎಲ್ಲಿಯೂ ನೀರು ನಿಲ್ಲದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಶಾಲಾ ಮಕ್ಕಳಿಗೆ ಗುಣಮಟ್ಟದ ಶೂ ಖರೀದಿಸಬೇಕು. ವಿದ್ಯುತ್ ಕಂಬ್‌ಗಳನ್ನು ಕೂಡಲೇ ಬದಲಾವಣೆ ಮಾಡಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕು ಪಂಚಾಯಿತಿ ಇಒ ಡಾ.ರಾಮಚಂದ್ರ ಹೊಸಮನಿ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುರೇಶ ಗುರಣ್ಣವರ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಅಕ್ಷರ ದಾಸೋಹ ಯೋಜನೆಯ ಎಸ್.ವಿ. ಬಂಗಾರಿಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.