

ಮಂಡ್ಯ: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯು ಬಿಡುಗಡೆಯಾಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಳಿಗಾಗಿ ಡಿ.9ರವರೆಗೆ ಅವಕಾಶ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ, ಎಲ್ಲ ತಾಲೂಕು ಕಚೇರಿ ಹಾಗೂ ತಾಪಂ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಜಿಲ್ಲೆಯ ಒಟ್ಟು 8 ಮತಗಟ್ಟೆಗಳಲ್ಲಿ 2472 ಪುರುಷ ಹಾಗೂ 1813 ಮಹಿಳೆಯರು ಸೇರಿದಂತೆ ಒಟ್ಟು 4277 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕೆ.ಆರ್.ಪೇಟೆ ಮತಗಟ್ಟೆಯಲ್ಲಿ 247 ಪುರುಷ ಹಾಗೂ 114 ಮಹಿಳೆ ಸೇರಿದಂತೆ 361 ಮತದಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ನಾಗಮಂಗಲದಲ್ಲಿ 218 ಪುರುಷ ಹಾಗೂ 108 ಮಹಿಳೆ ಸೇರಿ ಒಟ್ಟು 318, ಪಾಂಡವಪುರದಲ್ಲಿ 219 ಪುರುಷ ಹಾಗೂ 163 ಮಹಿಳೆ ಸೇರಿ 382, ಮಂಡ್ಯ ತಾಲೂಕು ಕಚೇರಿ ಮತಗಟ್ಟೆಯಲ್ಲಿ 482 ಪುರುಷ ಹಾಗೂ 521 ಮಹಿಳೆ ಸೇರಿ 1003, ಮಂಡ್ಯ ತಾಪಂ ಮತಗಟ್ಟೆಯಲ್ಲಿ 351 ಪುರುಷ ಹಾಗೂ 256 ಮಹಿಳೆ ಸೇರಿ 607, ಮದ್ದೂರಿನಲ್ಲಿ 486 ಪುರುಷ ಹಾಗೂ 351 ಮಹಿಳೆ ಸೇರಿದಂತೆ 819, ಶ್ರೀರಂಗಪಟ್ಟಣದಲ್ಲಿ 109 ಪುರುಷ ಹಾಗೂ 130 ಮಹಿಳೆ ಸೇರಿದಂತೆ 239 ಮತ್ತು ಮಳವಳ್ಳಿ ಮತಗಟ್ಟೆಯಲ್ಲಿ 378 ಪುರುಷ ಹಾಗೂ 170 ಮಹಿಳೆಯರು ಸೇರಿದಂತೆ 548 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಮುಖ್ಯ ಚುನಾವಣಾಧಿಕಾರಿ ಕಾರ್ಯಾಲಯದ ನಿರ್ದೇಶನದಂತೆ ಭಾವಚಿತ್ರವಿರುವ ಮುದ್ರಿತ ಕರಡು ಮತದಾರರ ಪಟ್ಟಿಯನ್ನು ಮತ್ತು ಭಾವಚಿತ್ರವಿಲ್ಲದ ಕರಡು ಮತದಾರರ ಪಟ್ಟಿಯ ದತ್ತಾಂಶವನ್ನು ನೋಂದಾಯಿತ ರಾಜಕೀಯ ಪಕ್ಷಗಳ ಜಿಲ್ಲಾ ಮಟ್ಟದ ಪ್ರತಿನಿಧಿಗಳಿಗೆ ವಿತರಿಸಲಾಗಿದೆ ಎಂದರು.
ಸಭೆಯಲ್ಲಿ ಕಾಂಗ್ರೆಸ್‌ನ ಮುಖಂಡ ಸುಂಡಹಳ್ಳಿ ಮಂಜುನಾಥ್, ಜೆಡಿಎಸ್‌ನ ನವೀನ್, ಬಿಎಸ್ಪಿಯ ದಿನೇಶ್, ಬಿಜೆಪಿಯ ವೆಂಕಟೇಶ್, ಎಎಪಿ ಪಕ್ಷದ ಮುಖಂಡ ಬೂದನೂರು ಬೊಮ್ಮಯ್ಯ ಹಾಜರಿದ್ದರು.