

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣಾ ಪ್ರಕ್ರಿಯೆಗಳ ನಿರ್ವಹಣೆಯ ಬಳಿಕ ಜಿಲ್ಲಾಡಳಿತವು, ಇದೀಗ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲು ಮುಂದಾಗಿದೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ವಿಚಾರವಾಗಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಶನಿವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ, ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಈಗಾಗಲೇ ಲೋಕಸಭಾ ಚುನಾವಣಾ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.
* ಚುನಾವಣಾ ಅಧಿಸೂಚನೆ
ಚುನಾವಣೆಗೆ ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಮೇ.9 ರಂದು ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಲಿದ್ದು ಇದರೊಂದಿಗೆ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜೂ.3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ. ಜೂ.6 ರಂದು ಮತ ಎಣಿಕೆ ಪ್ರಕ್ರಿಯೆ ಕೈಗೊಂಡು ಫಲಿತಾಂಶ ಘೋಷಿಸಲಾಗುತ್ತದೆ.
* 10 ಮತಗಟ್ಟೆಗಳ ಸ್ಥಾಪನೆ
ಅಗ್ನೇಯ ಶಿಕ್ಷಕರ ಚುನಾವಣೆಗೆ ಜಿಲ್ಲೆಯಲ್ಲಿ 10 ಮತಗಟ್ಟೆಗಳನ್ನು ಸ್ಥಾಪಿಸಿದ್ದು ಗೌರಿಬಿದನೂರು, ಮಂಚೇನಹಳ್ಳಿ, ಬಾಗೇಪಲ್ಲಿ, ಚೇಳೂರು, ಗುಡಿಬಂಡೆ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮತ್ತು ಚಿಂತಾಮಣಿಯಲ್ಲಿನ ತಾಲ್ಲೂಕು ಕಚೇರಿಗಳಲ್ಲಿ ಮತಗಟ್ಟೆಗಳು ಕಾರ್ಯ ನಿರ್ವಹಿಸಲಿವೆ. 750 ಕ್ಕೂ ಹೆಚ್ಚು ಮತದಾರರು ಇರುವ ಕಡೆ ಆಕ್ಸಿಲರಿ ಮತಗಟ್ಟೆಗಳನ್ನು ಸ್ಥಾಪಿಸಿದ್ದು ಅದರಂತೆ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ತಾಲೂಕುಗಳಲ್ಲಿ ಹೆಚ್ಚುವರಿ ತಲಾ 1 ಮತಗಟ್ಟೆಗಳು ಇರಲಿವೆ.
* ಜಿಲ್ಲೆಯಲ್ಲಿನ ಮತದಾರರು
ಜಿಲ್ಲೆಯಲ್ಲಿ 3,510 ಮತದಾರರು ಇದ್ದು ಈ ಪೈಕಿ 2,074 ಪುರುಷರು, 1,436 ಮಹಿಳೆಯರು ಸೇರಿದ್ದಾರೆ. ಈಗಾಗಲೇ ಮತದಾರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಚುನಾವಣಾ ವೇಳಾಪಟ್ಟಿ
ಮೇ.9: ಅಧಿಸೂಚನೆ ಪ್ರಕಟ
ಮೇ.16: ನಾಮಪತ್ರ ಸಲ್ಲಿಕೆಗೆ ಕೊನೆ ದಿನ.
ಮೇ.17: ನಾಮಪತ್ರಗಳ ಪರಿಶೀಲನೆ
ಮೇ.20: ಉಮೇದುವಾರಿಕೆ ವಾಪಸ್ಸಾತಿಗೆ ಅವಕಾಶ
ಜೂ.3: ಮತದಾನ
ಜೂ.6: ಮತ ಎಣಿಕೆ
ಜೂ.12: ನೀತಿ ಸಂಹಿತೆ ಅವಧಿ ಮುಕ್ತಾಯ