ಆಗ್ನೇಯ ಪದವೀಧರರ ಕ್ಷೇತ್ರ ಬಿಜೆಪಿಯಲ್ಲಿ ಮತ್ತೆ ಭಿನ್ನಮತ!

bjp logo
Published on

ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಂಡಾಯ ಶಮನಗೊಳಿಸಲಾಗಿದೆ ಎಂಬ ಪಕ್ಷದ ಮುಖಂಡರ ಹೇಳಿಕೆ ಬೆನ್ನೆಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಬಂಡಾಯ ಅಭ್ಯರ್ಥಿಯಾಗಿ ಹಾಲನೂರು ಎಸ್.ಲೇಪಾಕ್ಷ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ.

2 ಶಿಕ್ಷಕರು, 2 ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಅ.28ರಂದು ಚುನಾವಣೆ ಘೋಷಣೆಯಾಗಿದ್ದು ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣೆಗೆರೆ ಸೇರಿ ಐದು ಜಿಲ್ಲೆಯನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರವನ್ನು ಮರಳಿ ತೆಕ್ಕೆಗೆ ಪಡೆಯಲು ಎಲ್ಲ ಸಂಪನ್ಮೂಲಗಳೊಂದಿಗೆ ಹೋರಾಟ ನಡೆಸಿರುವ ಬಿಜೆಪಿಗೆ ‘ಬಂಡಾಯ’ದ ಬಿಸಿ ಸುಡುತ್ತಿದೆ.

ಬಂಡಾಯ ಶಮನಕ್ಕೆ ಯತ್ನ: ಬಿಜೆಪಿಗೆ ಗೆಲ್ಲುವ ಅವಕಾಶ ಇರುವ ಹಿನ್ನೆಲೆಯಲ್ಲಿ ಸಹಜವಾಗಿ ಆಕಾಂಕ್ಷಿಗಳ ದೊಡ್ಡ ದಂಡೇ ಇತ್ತು. ಆದರೂ, ವರ್ಷದ ಹಿಂದಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಚಿದಾನಂದ ಎಂ. ಗೌಡರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಆಕಾಂಕ್ಷಿಗಳ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿತ್ತು. ಈ ಆಂತರಿಕ ಬೇಗುದಿ ಶಮನಗೊಳಿಸುವ ನಿಟ್ಟಿನಲ್ಲಿ ಟಿಕೆಟ್ ಆಕಾಂಕ್ಷಿಗಳ ಜತೆ ಮಾತುಕತೆ ನಡೆಸಿದ್ದು ಯಾವುದೇ ಬಂಡಾಯ ಪಕ್ಷದಲ್ಲಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಬುಧವಾರ ನಾಮಪತ್ರ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಡಾ.ಆನಂದ್ ಕಿರಿಶ್ಯಾಳ, ಜಯಪ್ರಕಾಶ್ ಕೊಂಡಜ್ಜಿ, ಪಿ.ಆರ್. ಬಸವರಾಜು (ಪೆಪ್ಸಿ), ಸಿ.ಮಲ್ಲಿಕಾರ್ಜುನ್ ಪರವಾಗಿ ಹಾಲನೂರು ಎಸ್.ಲೇಪಾಕ್ಷ ಬುಧವಾರ ನಾಮಪತ್ರ ಸಲ್ಲಿಸಲಿದ್ದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಚಿದಾನಂದ ಗೌಡ ಹೊರಗಿನವರೆಂಬ ಅಸಮಾಧಾನ ಪಕ್ಷದ ಮುಖಂಡರಲ್ಲಿ ಮೊದಲಿನಿಂದ ಇದ್ದು ಚುನಾವಣೆ ಉಸ್ತುವಾರಿ ಹೊತ್ತಿರುವವರು ಹೇಗೆ ಸರಿಪಡಿಸುತ್ತಾರೆಂಬುದು ಕುತುಹೂಲ ಮೂಡಿಸಿದೆ.

ರಮೇಶ್‌ಬಾಬು ನಾಮಪತ್ರ: ಜೆಡಿಎಸ್ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಎಂಎಲ್ಸಿ, ಚಿಕ್ಕನಾಯಕನಹಳ್ಳಿಯ ರಮೇಶ್‌ಬಾಬು ಹೆಸರನ್ನು ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಪಕ್ಷವು ಎಐಸಿಸಿಗೆ ಶಿಫಾರಸು ಮಾಡಿದ್ದು ಅಧಿಕೃತ ಮುದ್ರೆಗಾಗಿ ಕಾಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವರಿಷ್ಠರ ಸೂಚನೆ ಮೇರೆಗೆ ಬುಧವಾರ ರಮೇಶ್‌ಬಾಬು ನಾಮಪತ್ರ ಸಲ್ಲಿಸಲಿದ್ದಾರೆ.

ತೂಪಲ್ಲಿ ಫೈನಲ್: ಜೆಡಿಎಸ್ ಹಾಲಿ ಎಂಎಲ್ಸಿ ಆರ್.ಚೌಡರೆಡ್ಡಿ ತೂಪಲ್ಲಿ ಪುನರಾಯ್ಕೆ ಬಯಸಿ ಚುನಾವಣಾ ಕಣಕ್ಕೆ ಧುಮುಕಿದ್ದು ಪಕ್ಷದ ವರಿಷ್ಠರು ಮಂಗಳವಾರ ಬೆಂಗಳೂರಿನಲ್ಲಿ ಪಕ್ಷದ ಶಾಸಕರು, ಜಿಲ್ಲಾ ಪದಾಧಿಕಾರಿಗಳು, ಮುಖಂಡರ ಸಭೆ ನಡೆಸಿ ಪಕ್ಷದ ಗೆಲುವಿಗೆ ಅನುಸರಿಸಬೇಕಾದ ತಂತ್ರಗಳ ಕುರಿತು ಚರ್ಚಿಸಿದ್ದಾರೆ. ಶಿರಾ ಬೈಎಲೆಕ್ಷನ್ ಜತೆ ಆಗ್ನೇಯ ಪದವೀಧರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ ಗಂಭೀರವಾಗಿ ತೆಗೆದುಕೊಂಡಿದೆ.

ಕಳೆದ ಬಾರಿ ಯಡಿಯೂರಪ್ಪನವರ ಮಾತಿಗೆ ಕಟ್ಟುಬಿದ್ದು ಕಣದಿಂದ ಹಿಂದೆ ಸರಿದಿದ್ದೆ. ಬಿಎಸ್‌ವೈ, ಸಂಸದ ಜಿ.ಎಸ್.ಬಸವರಾಜು ಕೂಡ ಕೊಟ್ಟ ಮಾತು ತಪ್ಪಿದ್ದಾರೆ. ಯಾರು ಏನೇ ಹೇಳಲಿ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ಹಾಲನೂರು ಎಸ್.ಲೇಪಾಕ್ಷ ಬಿಜೆಪಿ ಬಂಡಾಯ ಅಭ್ಯರ್ಥಿ ಎಂಎಲ್‌ಎ ಗೆಲ್ಲಲಿಕ್ಕೆ ಆಗದ ಪರಿಸ್ಥಿತಿಯಲ್ಲಿ ಎಂಎಲ್ಸಿ ಗೆಲ್ಲುತ್ತಿದ್ದೆವು. ಇದು ಪಕ್ಷದ ಪರವಾದ ಕ್ಷೇತ್ರ. ಬಿಜೆಪಿ ಗೆಲ್ಲುವ ಪಕ್ಷ. ಪುಳಿಯೋಗರೆ ಪಕ್ಷವೇನಲ್ಲ. ಎಲ್ಲರೂ ಪಕ್ಷಕ್ಕೆ ಸೇರುತ್ತಾರೆ. ಗೆಲ್ಲುವ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಲಿದ್ದು ಟಿಕೆಟ್ ಆಕಾಂಕ್ಷಿಗಳ ಜತೆ ಮಾತುಕತೆ ನಡೆಸಲಾಗಿದೆ. ಎಲ್ಲರೂ ಸಮಾಧಾನಗೊಂಡಿದ್ದಾರೆ. ರವಿಕುಮಾರ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net