

ಸುಬ್ರಹ್ಮಣ್ಯ: ನೈಋತ್ಯ ವಲಯ ರೈಲ್ವೆ ಜನರಲ್ ಮ್ಯಾನೇಜರ್ ಮುಕುಲ್ ಶರಣ್ ಮಾಥುರ್ ಮಂಗಳವಾರ ಕಡಬ ತಾಲೂಕಿನ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು. ಎರಡನೇ ಪ್ಲಾಟ್ಫಾರ್ಮ್ನಲ್ಲಿ ಸ್ವಲ್ಪ ಹೊತ್ತು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ರೈಲು ನಿಲ್ದಾಣದ ಪಾರ್ಕಿಂಗ್ ಕಾಮಗಾರಿ ವೀಕ್ಷಿಸಿ ಮಾಹಿತಿ ಪಡೆದರು. ಅಧಿಕಾರಿಗಳ ಜತೆ ಪಾದಚಾರಿ ಮೇಲ್ಸೇತುವೆ ಮೂಲಕ ಎರಡನೇ ಪ್ಲಾಟ್ಫಾರಂಗೆ ತೆರಳಿ ತಾವು ಆಗಮಿಸಿದ್ದ ರೈಲಿನಲ್ಲೇ ವಿವಿಧ ಅಧಿಕಾರಿಗಳ ಜತೆ ಚರ್ಚಿಸಿದರು. ಅಪರಾಹ್ನ 2.30ಕ್ಕೆ ರೈಲು ಸಕಲೇಶಪುರ ಕಡೆಗೆ ತೆರಳಿತು.
ಮಾಧ್ಯಮದವರ ಜತೆ ಮಾತನಾಡಿ, ನಾನು ಹೊಸದಾಗಿ ಬಂದಿದ್ದೇನೆ. ಕಾಮಗಾರಿ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದರಾದರೂ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ರಕ್ಷಣಾ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು, ಕಾಮಗಾರಿ ನಿರ್ವಹಿಸುವ ತಂಡ ಜತೆಗಿದ್ದರು.
ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಅಮೃತ ಭಾರತ್ ಯೋಜನೆಯಡಿ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಡಿಸೆಂಬರ್ನಲ್ಲಿ ಮುಗಿಯಬೇಕಿತ್ತು. ಮಾರ್ಚ್ ತಿಂಗಳಲ್ಲಿ ಮುಗಿಸುತ್ತೇವೆ ಎಂದಿದ್ದರು. ಕಾಮಗಾರಿಯ ಗುಣಮಟ್ಟದಲ್ಲಿ ಲೋಪ ಆಗಿದೆ. ಈ ಬಗ್ಗೆ ಇಲ್ಲಿಗೆ ಆಗಮಿಸುವ ಅಧಿಕಾರಿಗಳಿಗೆ ಮಾಹಿತಿ ನೀಡೋಣ ಎಂದರೆ ಅವರು ಕಾಟಾಚಾರಕ್ಕೆ ಭೇಟಿ ನೀಡಿದ ರೀತಿ ಬಂದು ಹೋಗುತ್ತಿದ್ದಾರೆ. ಸಮರ್ಪಕವಾಗಿ ಕಾಮಗಾರಿ ಪರಿಶೀಲನೆ ನಡೆಸದೆ ಹೋಗುವುದಾದರೆ ಯಾಕೆ ಬರುವುದು ಎಂದು ನೆಟ್ಟಣ ರೈಲ್ವೆ ಬಳಕೆದಾರರ ಸಂಘ ಪ್ರಸಾದ್ ನೆಟ್ಟಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಜಿಎಂ ಭೇಟಿ ನಿರಾಶೆದಾಯಕವಾಗಿದೆ. ಇಲ್ಲಿನ ಅಭಿವೃದ್ಧಿ, ಅವ್ಯವಸ್ಥೆ ಬಗ್ಗೆ ಸಂಬಂಧಿಸಿದವರಿಗೆ ತಿಳಿಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಲು ಬಂದರೂ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಸರ್ಕಾರದ ಹಣ ಖರ್ಚು ಮಾಡುತ್ತಿದ್ದಾರೆ. ಈ ಬಗ್ಗೆ ರೈಲ್ವೆ ಸಚಿವರ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಬೇಸರ ವ್ಯಕ್ತಪಡಿಸಿದ್ದಾರೆ.