ನೈಋತ್ಯ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸಭೆ

New Rail New
Published on

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿಯ 24 ನೇ ಸಭೆ ಇಲ್ಲಿನ ರೈಲ್ ಸೌಧದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.

ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಯಾಣಿಕರ ಸೌಲಭ್ಯಗಳು, ರೈಲು ಸೇವೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಪರಿಹಾರಗಳನ್ನು ರ್ಚಚಿಸಲಾಯಿತು.

ನೈಋತ್ಯ ರೈಲ್ವೆಗೆ ಸುರಕ್ಷತೆಯು ಉನ್ನತ ಆದ್ಯತೆಯಾಗಿದೆ. ಈ ವರ್ಷ ಯಾವುದೇ ಸಿಗ್ನಲ್ ಪಾಸಿಂಗ್ ಅಟ್ ಡೇಂಜರ್ ಪ್ರಕರಣಗಳು ದಾಖಲಾಗಿಲ್ಲ ಎಂದು ಅರವಿಂದ ಶ್ರೀವಾಸ್ತವ ಹೇಳಿದರು.

ನೈಋತ್ಯ ರೈಲ್ವೆಯು ಮೇಲ್ / ಎಕ್ಸ್​ಪ್ರೆಸ್ ರೈಲುಗಳಲ್ಲಿ ಶೇ. 86.46ರಷ್ಟು ಸಮಯಪ್ರಜ್ಞೆ ಸಾಧಿಸಿದೆ. ಭಾರತೀಯ ರೈಲ್ವೆಯಲ್ಲಿ 4 ನೇ ಸ್ಥಾನದಲ್ಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನವೆಂಬರ್​ವರೆಗೆ 28.34 ಮಿಲಿಯನ್ ಟನ್ ಗಳಷ್ಟು ಸರಕು ಲೋಡ್ ಮಾಡಿದ್ದು, 4,720.46 ಕೋಟಿ ರೂ.ಗಳ ಒಟ್ಟು ಹಂಚಿಕೆಯ ಆದಾಯ ಹಾಗೂ ಪ್ರಯಾಣಿಕರ ಆದಾಯದಲ್ಲಿ 1,629.45 ಕೋಟಿ ರೂ. ಸಾಧಿಸಿದ್ದಾಗಿ ತಿಳಿಸಿದರು.

ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನಿಲ್ದಾಣದ ಸೌಲಭ್ಯಗಳನ್ನು ಹೆಚ್ಚಿಸಲು ನೈಋತ್ಯ ರೈಲ್ವೆ ಮಹತ್ವದ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

ಹುಬ್ಬಳ್ಳಿ-ದೆಹಲಿ ಮಧ್ಯೆ ಹೊಸ ರಾಜಧಾನಿ ಎಕ್ಸ್​ಪ್ರೆಸ್ ರೈಲು ಸಂಚಾರವನ್ನು ಬೆಳಗಾವಿ, ಪುಣೆ, ಅಹ್ಮದಾಬಾದ್, ಜೈಪುರ ಮುಖಾಂತರ ಪ್ರಾರಂಭಿಸುವಂತೆ ವಲಯ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಹುಬ್ಬಳ್ಳಿ-ಮುಂಬೈ ಮತ್ತು ಬೆಳಗಾವಿ-ಹುಬ್ಬಳ್ಳಿ-ಬೆಂಗಳೂರು ಮಧ್ಯೆ ರಾತ್ರಿ ಸಮಯದಲ್ಲಿ ಹೊಸ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸಬೇಕು. ಹುಬ್ಬಳ್ಳಿ-ದಾದರ ರೈಲನ್ನು ಮುಂಬೈನ ಛತ್ರಪತಿ ಶಿವಾಜಿ ಟರ್ವಿುನಲ್​ವರೆಗೆ ಓಡಿಸಬೇಕು ಹಾಗೂ ಈ ರೈಲಿನ ಬೋಗಿಗಳ ಸಂಖ್ಯೆಯನ್ನು 22ಕ್ಕೆ ಏರಿಸುವಂತೆ ಮನವಿ ಮಾಡಿದರು. ಕಾಚಿಗೋಡ-ಹೈದ್ರಾಬಾದ್ ರೈಲು ಸಂಚಾರವನ್ನು ಪುನಃ ಪ್ರಾರಂಭಿಸುವಂತೆ ಆಗ್ರಹಿಸಿದರು. ಮನವಿಗೆ ಸ್ಪಂಧಿಸಿದ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಗೋವಾದ ಕರ್ಚೊರೆಮ್ ಶಾಸಕ ನೀಲೇಶ ಕ್ಯಾಬ್ರಾಲ್, ವಲಯ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸದಸ್ಯರಾದ ಜಿ.ಕೆ. ಆದಪ್ಪಗೌಡರ, ಸಿದ್ದರಾಮಯ್ಯ ಸಂಶಿಮಠ, ಕೆ.ಬಿ. ಲಿಂಗರಾಜು, ಪಿ. ಶ್ರೀನಿವಾಸಮೂರ್ತಿ, ದೇವಾನಂದ ನಾಯಕ ಭಂಡಾರಿ, ಸುಶೀಲ ನೋವಲ್, ಬಾಬುಲಾಲ್ ಜೈನ್, ಡಾ. ಲಕ್ಷ ಣ, ಕ್ಯಾಪ್ಟನ್ ಹಿಮಾಂಶು ಶೇಖರ್, ನೈಋತ್ಯ ರೈಲ್ವೆ ವಲಯದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net