

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯವು ಇದೇ ಸೆಪ್ಟೆಂಬರ್ನಲ್ಲಿ ಸರಕು ಸಾಗಣೆ ಮತ್ತು ಆದಾಯದಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದೆ.
ಈ ಅವಧಿಯಲ್ಲಿ ನೈಋತ್ಯ ರೈಲ್ವೆ ಒಟ್ಟು 4.17 ಮಿಲಿಯನ್ ಟನ್ (ಎಂಟಿ) ಮೂಲ ಸರಕುಗಳನ್ನು ಲೋಡ್ ಮಾಡಿದ್ದು, ರೈಲ್ವೆ ಮಂಡಳಿಯ 4.15 ಎಂಟಿ ಗುರಿಯನ್ನು ಮೀರಿಸಿದೆ. ಇದು ಕಳೆದ ವರ್ಷ ಇದೇ ತಿಂಗಳಲ್ಲಿ ದಾಖಲಾದ 3.3 ಎಂಟಿಗೆ ಹೋಲಿಸಿದರೆ ಶೇ. 25 ರಷ್ಟು ಗಮನಾರ್ಹ ಏರಿಕೆಯಾಗಿದೆ. 2023-24 ರಲ್ಲಿ ದಾಖಲಾದ ಹಿಂದಿನ ಅತ್ಯುತ್ತಮ 4.1 ಎಂಟಿ ದಾಖಲೆಯನ್ನು ಮೀರಿಸಿದೆ.
ಈ ಸಾಧನೆ ಮುಖ್ಯ ಸರಕುಗಳಲ್ಲಿ ಕಂಡುಬಂದ ಸುಧಾರಿತ ಕಾರ್ಯಕ್ಷಮತೆಯಿಂದ ಸಾಧ್ಯವಾಗಿದೆ. ಕಬ್ಬಿಣದ ಅದಿರು ಲೋಡಿಂಗ್ ಶೇ. 2.8 ಏರಿಕೆಯಾಗಿ , 1.583 ಎಂಟಿನಿಂದ 1.628ಎಂಟಿಗೆ ತಲುಪಿದೆ.
ಉಕ್ಕಿನ ಲೋಡಿಂಗ್ ಶೇ. 53.3 ರಷ್ಟು ಏರಿಕೆಯಾಗಿ 0.591 ಎಂಟಿನಿಂದ 0.906 ಎಂಟಿಗೆ ತಲುಪಿದೆ. ಕಲ್ಲಿದ್ದಲು ಲೋಡಿಂಗ್ ಶೇ. 45.8 ರಷ್ಟು ಹೆಚ್ಚಾಗಿ. 0.511 ಎಂಟಿನಿಂದ 0.745 ಎಂಟಿ ಆಗಿದೆ. ಉಕ್ಕಿನ ಸ್ಥಾವರಗಳಿಗೆ ಕಚ್ಚಾ ವಸ್ತು ಲೋಡಿಂಗ್ ಶೇ. 306 ರಷ್ಟು ಅಸಾಧಾರಣ ಏರಿಕೆಯನ್ನು ಕಂಡು, 0.083 ಎಂಟಿನಿಂದ 0.337 ಎಂಟಿ ಆಗಿದೆ. ರಸಗೊಬ್ಬರ ಲೋಡಿಂಗ್ ಶೇ 29.8ರಷ್ಟು ಏರಿಕೆಯಾಗಿ, 0.109 ಎಂಟಿ ತಲುಪಿದ್ದು, ಕಂಟೇನರ್ ಸಂಚಾರವೂ ಶೇ. 37.9 ರಷ್ಟು ಏರಿಕೆಯಾಗಿ 0.058 ಎಂಟಿನಿಂದ 0.080 ಎಂಟಿ ಆಗಿದೆ.
ಪ್ರಯಾಣಿಕರ ಸೇವೆಗಳ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದೆ. ಇದೇ ಸೆಪ್ಟೆಂಬರ್ನಲ್ಲಿ 282 ಕೋಟಿ ಪ್ರಯಾಣಿಕರ ಆದಾಯ ಗಳಿಸಿದ್ದು, ಇದು 2024ರ ಸೆಪ್ಟೆಂಬರ್ನ 264.83 ಕೋಟಿ ರೂ.ಗಿಂತ ಶೇ 6.38 ರಷ್ಟು ಹೆಚ್ಚಾಗಿದೆ. ಪ್ರಯಾಣಿಕರ ಸಂಖ್ಯೆಯು ಕೂಡ 14.34 ಮಿಲಿಯನ್ಗೆ ಏರಿದ್ದು, ಇದು ಕಳೆದ ವರ್ಷದ 13.37 ಮಿಲಿಯನ್ ಪ್ರಯಾಣಿಕರಿಗಿಂತ ಶೇ 7.26ರಷ್ಟು ಹೆಚ್ಚಳವಾಗಿದೆ.
ಸರಕು ಸಾಗಣೆ ವಿಭಾಗವು ವಲಯದ ಒಟ್ಟು ಆದಾಯದ ಪ್ರಮುಖ ಚಾಲಕವಾಗಿದ್ದು, ಸರಕು ಸಾಗಣೆ ಆದಾಯವು 427.50 ಕೋಟಿ ರೂ.ಗೆ ತಲುಪಿದೆ. ಇದು ಕಳೆದ ವರ್ಷ ಇದೇ ತಿಂಗಳಲ್ಲಿ ದಾಖಲಾದ 314.85 ಕೋಟಿ ರೂ.ಗಿಂತ ಶೇ 35.78ರಷ್ಟು ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ವಲಯದ ಅತ್ಯುತ್ತಮ ಮಾಸಿಕ ಸರಕು ಸಾಗಣೆ ಪ್ರದರ್ಶನಗಳಲ್ಲಿ ಒಂದಾಗಿದೆ.
ಒಟ್ಟ್ಟಾರೆಯಾಗಿ, ಈ ಸೆಪ್ಟೆಂಬರ್ವರೆಗೆ ನೈಋತ್ಯ ರೈಲ್ವೆಯು ಸರಕು ಸಾಗಣೆಯಿಂದ 2,578 ಕೋಟಿ ರೂ. ಆದಾಯ ಗಳಿಸಿದ್ದು, ಇದು ಹಿಂದಿನ ವರ್ಷದ 2,025.33 ಕೋಟಿ ರೂ.ಗಿಂತ ಶೇ. 27.29ರಷ್ಟು ಹೆಚ್ಚಾಗಿದೆ.
ಅದೇ ಅವಧಿಯಲ್ಲಿ ಪ್ರಯಾಣಿಕರ ಆದಾಯ 1,650 ಕೋಟಿ ರೂ.ಗೆ ಏರಿದ್ದು, ಕಳೆದ ವರ್ಷದ 1,606.56 ಕೋಟಿ ರೂ.ಗಿಂತ ಶೇ. 2.68ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 2025 ರವರೆಗೆ ಒಟ್ಟು 87.99 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಲಾಗಿದ್ದು, ಇದು 2024 ರ ಇದೇ ಅವಧಿಯ 82.38 ಮಿಲಿಯನ್ ಪ್ರಯಾಣಿಕರಿಗಿಂತ ಶೇ. 6.81 ರಷ್ಟು ಹೆಚ್ಚಳವಾಗಿದೆ.