

ಹುಬ್ಬಳ್ಳಿ : ರೈಲು ಕಾರ್ಯುಚರಣೆಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಪರ್ಕದಲ್ಲಿ ಅಸಾಧಾರಣ ಬೆಳವಣಿಗೆ ಕಂಡುಬಂದಿದೆ ಮತ್ತು ನೈಋತ್ಯ ರೈಲ್ವೆಯ ಶೇ. 89ರಷ್ಟು ಮಾರ್ಗ ವಿದ್ಯುದ್ದೀಕರಣಗೊಂಡಿದೆ ಎಂದು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಹೇಳಿದರು.
ನೈಋತ್ಯ ರೈಲ್ವೆಯ ಮುಖ್ಯ ಕಚೇರಿ ಇಲ್ಲಿನ ರೈಲ್ ಸೌಧದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನೈಋತ್ಯ ರೈಲ್ವೆ 29.55 ಮಿಲಿಯನ್ ಟನ್ಗಳಷ್ಟು ಐತಿಹಾಸಿಕ ಸರಕು ಸಾಗಣೆೆಯನ್ನು ಸಾಧಿಸಿದೆ (ಇದೇ ಜನವರಿಯಿಂದ ಜುಲೈವರೆಗೆ ). ಒಟ್ಟು 3,056.47 ಕೋಟಿ ಆದಾಯವನ್ನು ಗಳಿಸಿದೆ. ಇದು 5,468 ಕೋಟಿ ಮೂಲ ಆದಾಯಕ್ಕೆ ತಲುಪಿದೆ ಎಂದು ಹೇಳಿದರು .
ದೊಡ್ಡ ಪ್ರಮಾಣದ ಟ್ರಾ್ಯಕ್ ನವೀಕರಣದಲ್ಲಿ 1,015 ಕೋಟಿ ಹೂಡಿಕೆಯೊಂದಿಗೆ ಪ್ರಮುಖ ಮಾರ್ಗಗಳಲ್ಲಿ 130 ಕಿಮೀ ಪ್ರತಿ ಗಂಟೆಗೆ ವೇಗವನ್ನು ಹೆಚ್ಚಿಸಲಾಗಿದೆ ಎಂದರು .
ನೈಋತ್ಯ ರೈಲ್ವೆ ಪ್ರಾದೇಶಿಕ, ಸಾಮಾಜಿಕ, ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು, ಸುರಕ್ಷತೆ, ಮೂಲಸೌಕರ್ಯ ವಿಸ್ತರಣೆ ಹಾಗೂ ಸಂಪರ್ಕತೆಯಲ್ಲಿ ಅಸಾಧಾರಣ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್ ಹಾಗೂ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.