

ಹುಬ್ಬಳ್ಳಿ : ದೀಪಾವಳಿ ಅಂಗವಾಗಿ ನೈಋತ್ಯ ರೈಲ್ವೆ ವಲಯದಿಂದ 124 ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದ್ದು, ಈ ರೈಲುಗಳ ಮುಖಾಂತರ ಕೇವಲ ಒಂದು ವಾರದಲ್ಲಿ 1ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಿಂದ 10 ಕೋಟಿ ರೂ.ಗೂ ಹೆಚ್ಚಿನ ಆದಾಯವಾಗಿದೆ.
ಅ. 15 ರಿಂದ 21ರವರೆಗೆ ಸಂಚರಿಸಿರುವ ನಿತ್ಯದ ಸಾಮಾನ್ಯ ರೈಲುಗಳು, ವಿಶೇಷ ರೈಲುಗಳು, ಪ್ರಯಾಣಿಕರ ಸಂಖ್ಯೆ, ಬಂದಿರುವ ಆದಾಯದ ಕುರಿತು ನೈಋತ್ಯ ರೈಲ್ವೆ ವಲಯ ಮಾಹಿತಿ ನೀಡಿದೆ.
ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ವಿವಿಧ ನಿಲ್ದಾಣಗಳಿಂದ ದೇಶದ ಬೇರೆ ಬೇರೆ ನಿಲ್ದಾಣಗಳಿಗೆ ದೀಪಾವಳಿ ಅಂಗವಾಗಿ ಆರಂಭಿಸಿದ್ದ ವಿಶೇಷ ರೈಲುಗಳಿಗೆ ಪ್ರಯಾಣಿಕರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 99 ವಿಶೇಷ ರೈಲುಗಳ ಸಂಚಾರ ಆರಂಭಿಸಲಾಗಿತ್ತು. ಕಳೆದ ವರ್ಷ ವಿಶೇಷ ರೈಲುಗಳು 305 ಟ್ರಿಪ್ ಸಂಚಾರ ನಡೆಸಿದ್ದರೆ, ಈ ವರ್ಷ 348 ಟ್ರಿಪ್ ಸಂಚಾರ ನಡೆಸಿವೆ. ಇದರೊಂದಿಗೆ ವಿವಿಧ ರೈಲ್ವೆ ವಲಯಗಳ 40 ರೈಲುಗಳ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ 134 ಟ್ರಿಪ್ ಸಂಚಾರ ನಡೆಸಿವೆ. ಒಟ್ಟು 164 ವಿಶೇಷ ರೈಲುಗಳು 482 ಟ್ರಿಪ್ ಸಂಚಾರವನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಸಿವೆ.
ಸಾಮಾನ್ಯವಾಗಿ ನೈಋತ್ಯ ರೈಲ್ವೆಯಿಂದ ನಿತ್ಯ 340 ರೈಲುಗಳು ಸಂಚಾರ ನಡೆಸಿವೆ. ಹಬ್ಬದ ಸಂದರ್ಭದಲ್ಲಿ ಈ ರೈಲುಗಳಲ್ಲಿ ಉಂಟಾಗುತ್ತಿದ್ದ ಪ್ರಯಾಣಿಕರ ದಟ್ಟಣೆ ಗಮನಿಸಿ, ವಿಶೇಷ ರೈಲುಗಳ ಸಂಚಾರ ಆರಂಭಿಸಲಾಗಿದೆ. ನಿತ್ಯದ ರೈಲುಗಳಲ್ಲಿ 8.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚಾರ ನಡಸಿದ್ದಾರೆ. ಇದರಿಂದಾಗಿ 61 ಕೋಟಿ ರೂ.ಗೂ ಹೆಚ್ಚಿನ ಆದಾಯ ನೈಋತ್ಯ ರೈಲ್ವೆ ವಲಯದ ಬೊಕ್ಕಸ ಸೇರಿದೆ.
ಕೇವಲ ಒಂದು ವಾರದಲ್ಲಿ ನೈಋತ್ಯ ರೈಲ್ವೆ ವಲಯ ವಿಶೇಷ ರೈಲು ಹಾಗೂ ನಿತ್ಯದ ಸಾಮಾನ್ಯ ರೈಲುಗಳಿಂದ 71 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ.
ವಿಶೇಷ ರೈಲುಗಳ ಸಂಚಾರದಿಂದಾಗಿ ಪ್ರಯಾಣಿಕರು ದಟ್ಟಣೆ ಇಲ್ಲದೇ ತಮ್ಮ ತಮ್ಮ ಊರುಗಳಿಗೆ ತಲುಪಿ, ಹಬ್ಬ ಆಚರಿಸಿದ್ದಾರೆ. ನಂತರ ಮರಳಿ ಮೂಲ ಸ್ಥಳಕ್ಕೆ ಪ್ರಯಾಣಿಸಿದ್ದಾರೆ.
ಹಬ್ಬದ ಅಂಗವಾಗಿ ನೈಋತ್ಯ ರೈಲ್ವೆಯ ಎಲ್ಲ ನಿಲ್ದಾಣಗಳಲ್ಲಿ ರೈಲುಗಳು ಸಂಚರಿಸುವ ನಿಗದಿತ ಸಮಯ ಅರಿತುಕೊಳ್ಳುವುದಕ್ಕಾಗಿ ಪ್ರಯಾಣಿಕರಿಗೆ ಸಹಾಯ ಒದಗಿಸಲಾಗಿತ್ತು. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗಾಗಿ ನಿಲ್ದಾಣಗಳಲ್ಲಿ ಬ್ಯಾಟರಿ ಚಾಲಿತ ವಾಹನಗಳನ್ನು ನೀಡಲಾಗಿತ್ತು. ತಪ್ಪಿಸಿಕೊಂಡ ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಕೇಂದ್ರಗಳನ್ನು ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿತ್ತು. ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ತರಬೇತಿ ಹೊಂದಿದ ಟಿಟಿಇಗಳನ್ನು ಹಾಗೂ ಆರ್ಪಿಎಫ್ ಸಿಬ್ಬಂದಿಯನ್ನು ನಿಲ್ದಾಣ ಹಾಗೂ ರೈಲುಗಳಲ್ಲಿ ನಿಯೋಜಿಸಲಾಗಿತ್ತು ಎಂದು ನೈಋತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.