

ಮೈಸೂರು: ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಶಿವಮೊಗ್ಗ, ಉಡುಪಿ ಜಿಲ್ಲೆಗಳನ್ನೊಳಗೊಂಡ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಸತತ ಎರಡನೇ ಬಾರಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಭೋಜೇಗೌಡ ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುವಿನ ನಗೆ ಬೀರಿದರು. ಭೋಜೇಗೌಡ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ.ಕೆ.ಕೆ.ಮಂಜುನಾಥ್ ಕುಮಾರ್ (ಮಾಸ್ಟ್ರು) ವಿರುದ್ಧ 5,267 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಒಟ್ಟು 19,479 ಮತಗಳು ಚಲಾವಣೆಯಾಗಿತ್ತು. ಈ ಪೈಕಿ 821 ಮತಗಳು ಕುಲಗೆಟ್ಟವು. 18,658 ಸಿಂಧುವಾದ ಮತಗಳಿಗೆ 9,330 ಮತಗಳ ಕೋಟಾ ನಿಗದಿ ಮಾಡಲಾಗಿತ್ತು. ಭೋಜೇಗೌಡ 9829 ಮತಗಳನ್ನು ಗಳಿಸಿ ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಡಾ.ಕೆ.ಕೆ.ಮಂಜುನಾಥ್‌ಕುಮಾರ್ 4562 ಮತಗಳನ್ನು ಪಡೆದು ಸೋಲುಂಡರು.
ಕಣದಲ್ಲಿ ಒಟ್ಟು 8 ಅಭ್ಯರ್ಥಿಗಳು ಇದ್ದರು. ಭೋಜೇಗೌಡ ಹಾಗೂ ಡಾ.ಕೆ.ಕೆ. ಮಂಜುನಾಥ್‌ಕುಮಾರ್ ನಡುವೆ ನೇರ ಹಣಾಹಣಿ ನಡೆಯಿತು. ಉಳಿದ ಪಕ್ಷೇತರ ಅಭ್ಯರ್ಥಿಗಳು ನಿರೀಕ್ಷಿತ ಪ್ರಮಾಣದಲ್ಲಿ ಮತ ಗಳಿಸುವಲ್ಲಿ ವಿಫಲರಾದರು. ಪಕ್ಷೇತರ ಅಭ್ಯರ್ಥಿಗಳಾದ ಡಾ. ಅರುಣ್ ಹೊಸಕೊಪ್ಪ 1185, ಡಾ.ನರೇಶ್ಚಂದ್ರ ಹೆಗ್ಡೆ 184, ನಂಜೇಶ್ ಬೆಣ್ಣೂರು 621, ಟಿ. ಭಾಸ್ಕರಶೆಟ್ಟಿ 73, ಕೆ.ಕೆ. ಮಂಜುನಾಥ್ ಕುಮಾರ್ 103, ಡಾ.ಎಸ್.ಆರ್. ಹರೀಶ್ ಆಚಾರ್ಯ 2,101 ಮತಗಳನ್ನು ಪಡೆದರು.
ಭೋಜೇಗೌಡ ಮೊದಲ ಸುತ್ತಿನಲ್ಲಿ 3,309 ಮತಗಳನ್ನು, ಕೆ.ಕೆ. ಮಂಜುನಾಥ್ ಕುಮಾರ್ 1667 ಮತಗಳನ್ನು ಪಡೆದರು. ಮೊದಲ ಸುತ್ತಿನಲ್ಲಿ 1,642 ಮತಗಳನ್ನು ಮುನ್ನಡೆ ಪಡೆಯುವ ಮೂಲಕ ಭೋಜೇಗೌಡ ಗೆಲುವಿನ ಮುನ್ಸೂಚನೆ ನೀಡಿದರು. ನಂತರ ಎರಡು ಹಾಗೂ ಮೂರನೇ ಸುತ್ತಿನಲ್ಲೂ ಅವರು ಮುನ್ನಡೆ ಕಾಯ್ದುಕೊಂಡು ವಿಜಯಲಕ್ಷ್ಮೀಯನ್ನು ಒಲಿಸಿಕೊಂಡರು. ಎರಡನೇ ಸುತ್ತಿನಲ್ಲಿ ಭೋಜೇಗೌಡ 3,336, ಡಾ.ಕೆ.ಕೆ. ಮಂಜುನಾಥ್‌ಕುಮಾರ್ 1909 ಮತಗಳನ್ನು ಪಡೆದರೆ, ಮೂರನೇ ಸುತ್ತಿನಲ್ಲಿ ಭೋಜೇಗೌಡ 3,184, ಡಾ.ಕೆ.ಕೆ.ಮಂಜುನಾಥ್ 986 ಮತಗಳನ್ನು ಪಡೆದರು.
ಎಸ್.ಎಲ್. ಭೋಜೇಗೌಡ ಜೆಡಿಎಸ್ 9829
ಡಾ.ಕೆ.ಕೆ. ಮಂಜುನಾಥ್ ಕುಮಾರ್ ಕಾಂಗ್ರೆಸ್ 4562
ಡಾ. ಅರುಣ್ ಹೊಸಕೊಪ್ಪ ಪಕ್ಷೇತರ 1185
ಡಾ.ನರೇಶ್ಚಂದ್ರ ಹೆಗ್ಡೆ ಪಕ್ಷೇತರ 184
ನಂಜೇಶ್ ಬೆಣ್ಣೂರು ಪಕ್ಷೇತರ 621
ಟಿ. ಭಾಸ್ಕರ ಶೆಟ್ಟಿ ಪಕ್ಷೇತರ 73
ಕೆ.ಕೆ. ಮಂಜುನಾಥ್ ಕುಮಾರ್ ಪಕ್ಷೇತರ 103
ಡಾ.ಎಸ್.ಆರ್. ಹರೀಶ್ ಆಚಾರ್ಯ ಪಕ್ಷೇತರ 2,101
ಒಟ್ಟು ಮತಗಳು :19,479
ಕುಲಗೆಟ್ಟ ಮತಗಳು : 821
ಸಿಂಧುವಾದ ಮತಗಳು :18,658
ಶಿಕ್ಷಕರು ನನ್ನ ಮೇಲೆ ವಿಶ್ವಾಸ ಇರಿಸಿ ಈ ಬಾರಿಯೂ ಗೆಲ್ಲಿಸಿದ್ದಾರೆ. ಮೊದಲ ಪ್ರಾಶಸ್ತ್ಯ ಮತದಲ್ಲಿಯೇ ನನಗೆ ಶಿಕ್ಷಕರು ಗೆಲುವು ತಂದುಕೊಟ್ಟಿದ್ದಾರೆ. ಹಾಗಾಗಿ ಈ ಗೆಲುವನ್ನು ಶಿಕ್ಷಕ ಸಮುದಾಯಕ್ಕೆ ಅರ್ಪಿಸುತ್ತೇನೆ. ಈ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿತ್ತು. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಗೆಲುವು ಮತ್ತಷ್ಟು ಸುಲಭವಾಯಿತು. ಕಳೆದ ಬಾರಿ ನಾನು ಏಕಾಂಗಿಯಾಗಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದೆ. ಈ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮತ್ತಷ್ಟು ಬಲ ದೊರೆಯಿತು. ಉಭಯ ಪಕ್ಷಗಳ ನಾಯಕರು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡು ನನ್ನ ಗೆಲುವಿಗೆ ಶ್ರಮಿಸಿದರು. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
ಎಸ್.ಎಲ್. ಭೋಜೇಗೌಡ, ಜೆಡಿಎಸ್ ಅಭ್ಯರ್ಥಿ