ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಭೌಗೋಳಿಕ ಅನ್ಯಾಯ

udp-raghupathi bhat
Published on

ಉಡುಪಿ: ಕರಾವಳಿ ಭಾಗಕ್ಕೆ ಅನೇಕ ದಶಕಗಳಿಂದ ಪದವೀಧರ ಅಥವಾ ಶಿಕ್ಷಕರ ಕ್ಷೇತ್ರದಲ್ಲಿ ಪ್ರಾತಿನಿಧ್ಯ ನೀಡಲಾಗುತ್ತಿತ್ತು. ಈ ಬಾರಿ ನೀಡದೇ ಇರುವುದರಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಬಿಜೆಪಿಯಿಂದ ಭೌಗೋಳಿಕವಾಗಿ ಅನ್ಯಾಯವಾಗಿದೆ. ವ್ಯಕ್ತಿಯ ಸಾಧನೆ ಆಧಾರಿತ ಚುನಾವಣೆ, ಅಗ್ನಿ ಪರೀಕ್ಷೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಮಾಜಿ ಶಾಸಕ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ. ರಘುಪತಿ ಭಟ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಕ್ಕಳಿಗೆ ಯಕ್ಷ ಶಿಕ್ಷಣ, ಸಾಧಕ ಶಿಕ್ಷಕ ಪ್ರಶಸ್ತಿ, ಕಲ್ಸಂಕ ರಸ್ತೆ ಅಗಲೀಕರಣ, ಜಿಲ್ಲಾಧಿಕಾರಿ ಸಂಕಿರಣ, ಪೆರಂಪಳ್ಳಿ&ಮಣಿಪಾಲ, ಬ್ರಹ್ಮಾವರ-ನೀಲಾವರ ಚತುಷ್ಪಥ ರಸ್ತೆ, ಜಿಲ್ಲಾಸ್ಪತ್ರೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. 5 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ ಮೇಲೆ ಗೆಲ್ಲುವ ವಿಶ್ವಾಸ ಇಮ್ಮಡಿಯಾಗಿದೆ. ಅಲ್ಪ ಅವಧಿಯಲ್ಲಿ ಶಿಕ್ಷಕರು, ಪದವೀಧರರು, ವಕೀಲರ ಬೆಂಬಲ ಸಿಗುತ್ತಿದೆ. ಬಹುಸಂಖ್ಯೆಯಲ್ಲಿ ಕಾರ್ಯಕರ್ತರು ಆಂತರ್ಯದಲ್ಲಿ ಬೆಂಬಲ ನೀಡುತ್ತಿದ್ದಾರೆ ಎಂದರು.

ಜೀ ಹುಜೂರ್​ ಸಂಸ್ಕೃತಿ ಒಪ್ಪಲ್ಲ
ನಾನು ಬಿಜೆಪಿ ಸೋಲಿಸಲು ನಿಂತಿಲ್ಲ. ಪಕ್ಷ ನನ್ನನ್ನು ಬೆಳೆಸಿದೆ. ನಾನೂ ಪಕ್ಷಕ್ಕೋಸ್ಕರ ಸೇವೆ ಮಾಡಿದ್ದೇನೆ. ಬಿಜೆಪಿ ಯುವಮೋರ್ಚಾ ಮತ್ತು ಜಿಲ್ಲಾಧ್ಯಕ್ಷನಾಗಿ ಇಡೀ ಜಿಲ್ಲೆಯಲ್ಲಿ ಕಾರ್ಯಕರ್ತರ ತಂಡ ಕಟ್ಟಿದ್ದೇವೆ. ಕಾರ್ಯಕರ್ತರ ಧ್ವನಿಯಾಗಿ ನಿಂತಿದ್ದೇನೆ. ಚುನಾವಣಾ ರಾಜಕೀಯದಿಂದ ದೂರ ಉಳಿಯುವುದು ನನ್ನ ಜಾಯಮಾನಕ್ಕೆ ಒಗ್ಗುವುದಿಲ್ಲ. ರಾಜಕೀಯದಿಂದ ಹಿನ್ನಲೆಗೆ ಸರಿಸುವ ಪ್ರಯತ್ನಗಳನ್ನು ಗಮನಿಸಿ ಸ್ಪರ್ಧಿಸುತ್ತಿದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆಯದೆ ಯಾರನ್ನು ಬೇಕಾದರೂ ಕಣಕ್ಕೆ ಇಳಿಸುವ ಜೀ ಹುಜೂರ್​ ಸಂಸತಿ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ಉಚ್ಚಾಟನೆ ಅಗತ್ಯವಿರಲಿಲ್ಲ
2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನ್ನ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸುಧಾಕರ ಶೆಟ್ಟಿ ಸ್ಪರ್ಧಿಸಿದ್ದರು. ಅವರಿಗೆ ಈಗಿನ ಶಾಸಕರೂ ಬೆಂಬಲ ನೀಡಿದ್ದರು. ನಾವು ಯಾರನ್ನೂ ಆ ಸಂದರ್ಭದಲ್ಲಿ ಉಚ್ಚಾಟಿಸಿರಲಿಲ್ಲ. ಗೆದ್ದ ಬಳಿಕ ನಮ್ಮ ವಿರುದ್ಧ ಇದ್ದವರಿಗೂ ಪಕ್ಷದಲ್ಲಿ ಹುದ್ದೆ ನೀಡಿದ್ದೇವು. ಈಗಿನ ಶಾಸಕರನ್ನು ನಗರಸಭೆಗೆ ನಾಮನಿದೇರ್ಶನ ಮಾಡಿದ್ದೆ ಎಂದರು. ಮಾಜಿ ನಗರಸಭಾ ಸದಸ್ಯ ಮಹೇಶ್​ ಠಾಕೂರ್​, ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್​, ಪ್ರಮುಖರಾದ ಶಿವರಾಮ ಉಡುಪ, ರೋಶನ್​ ಶೆಟ್ಟಿ, ಜುನೈದ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net