ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ: ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ ಜಿಲ್ಲಾಡಳಿತ

South Teachers Constituency Election mandya
Published on

ಮಂಡ್ಯ: ದಕ್ಷಿಣ ಶಿಕ್ಷಕರ ಕ್ಷೇತ್ರದ ಜಿಲ್ಲೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಶನಿವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 4,860 ಮತದಾರರಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ 296 ಪುರುಷರು ಮತ್ತು 131 ಮಹಿಳೆಯರು ಸೇರಿದಂತೆ 427, ನಾಗಮಂಗಲ ಕ್ಷೇತ್ರದಲ್ಲಿ 268 ಪುರುಷ ಹಾಗೂ 132 ಮಹಿಳೆಯರು ಸೇರಿ 400, ಮೇಲುಕೋಟೆ ಕ್ಷೇತ್ರದಲ್ಲಿ 228 ಪುರುಷರು ಹಾಗೂ 167 ಮಹಿಳೆಯರು ಸೇರಿದಂತೆ 395, ಮಂಡ್ಯ ಕ್ಷೇತ್ರದಲ್ಲಿ 923 ಪುರುಷ ಹಾಗೂ 846 ಮಹಿಳೆಯರು ಸೇರಿದಂತೆ 1,769 ಮತದಾರಿದ್ದಾರೆ ಎಂದರು.

ಮದ್ದೂರು ಕ್ಷೇತ್ರದಲ್ಲಿ 502 ಪುರುಷ ಹಾಗೂ 373 ಮಹಿಳೆಯರು ಸೇರಿದಂತೆ 875, ಶ್ರೀರಂಗಪಟ್ಟಣದಲ್ಲಿ 182 ಪುರುಷರು ಮತ್ತು 201 ಮಹಿಳೆಯರು ಸೇರಿ 383, ಮಳವಳ್ಳಿ ಕ್ಷೇತ್ರದಲ್ಲಿ 420 ಪುರುಷ ಹಾಗೂ 191 ಮಹಿಳೆಯರು ಸೇರಿದಂತೆ ಒಟ್ಟು 611 ಜನರು ಮತದಾನ ಮಾಡಲು ಅರ್ಹರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 2,819 ಪುರುಷ ಹಾಗೂ 2,041 ಮಹಿಳಾ ಮತದಾರರಿದ್ದಾರೆ ಎಂದು ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ 2024ಕ್ಕೆ ಸಂಬಂದಿಸಿದಂತೆ ಭಾರತ ಚುನಾವಣಾ ಆಯೋಗವು ಪರಿಷ್ಕೃತ ವೇಳಾಪಟ್ಟಿಯನ್ನು ಹೊರಡಿಸಿದೆ. ಹಕ್ಕು ಮತ್ತು ಆಕ್ಷೇಪಣೆ ಇತ್ಯರ್ಥಪಡಿಸುವ ದಿನಾಂಕವನ್ನು ಜ.12, ದತ್ತಾಂಶಗಳನ್ನು ಸಂಗ್ರಹಿಸಿ ಮತ್ತು ಪರಿಶೀಲಿಸುವುದನ್ನು ಜ.17 ಹಾಗೂ ಅಂತಿಮ ಮತದಾರರ ಪಟ್ಟಿಯನ್ನು ಜ.22ರಂದು ಪ್ರಕಟಿಸಲಾಗುವುದು ಎಂದರು.

ಸಭೆಯಲ್ಲಿ ರಾಜಕೀಯ ಪಕ್ಷದ ಮುಖಂಡರಾದ ಮಂಜುನಾಥ್, ನವೀನ್, ರಮೇಶ್, ದಿನೇಶ್, ಬೊಮ್ಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net