

ಹುಬ್ಬಳ್ಳಿ : ವಿಶ್ವದಾದ್ಯಂತ ಅಶಾಂತಿ ಮತ್ತು ಯುದ್ಧದ ಮನಸ್ಥಿತಿ ಉದ್ಭವವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನೆಲ್ಲೆಡೆ ಶಾಂತಿ ಮತ್ತು ಸಾಮರಸ್ಯವನ್ನು ಹುಟ್ಟು ಹಾಕಲು ದಕ್ಷಿಣ ಕೋರಿಯಾದ ಸರ್ಕಾರೇತರ ಸಂಸ್ಥೆ (ಎನ್ಜಿಒ)ಯಾದ ಹೆವೆನ್ಲಿ ಕಲ್ಚರ್, ವರ್ಲ್ಡ್ ಪೀಸ್, ರಿಸ್ಟೋರೇಷನ್ ಆಫ್ ಲೈಟ್ ಸಂಸ್ಥೆಯೊಂದಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ.ಬಸವರಾಜು ಹೇಳಿದರು.
ಇಲ್ಲಿನ ನವನಗರದ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ದಕ್ಷಿಣ ಕೋರಿಯಾದ ಹೆವೆನ್ಲಿ ಕಲ್ಚರ್, ವರ್ಲ್ಡ್ ಪೀಸ್, ರೆಸೊ್ಟೕರೇಷನ್ ಆಫ್ ಲೈಟ್ ಜತೆಗೆ ಒಡಂಬಡಿಕೆ ವಿನಿಮಯಕ್ಕೆ ಸಹಿ ಹಾಕಿ, ಅವರು ಮಾತನಾಡಿದರು.
ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಜನರಲ್ಲಿ ಶಾಂತಿ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಹೊಸದಾಗಿ ‘ಶಾಂತಿ ಮತ್ತು ಸಾಮರಸ್ಯ‘ ಎಂಬ ಒಂದು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸ್ ಅನ್ನು 2024-25 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭಿಸಲಾಗುವುದು. ಈ ಕೋರ್ಸ್ ಅನ್ನು ಮೊದಲಿಗೆ ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾಗುವುದು. ನಂತರದ ದಿನಗಳಲ್ಲಿ ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳು ಬೇಡಿಕೆ ಸಲ್ಲಿಸಿದರೆ ಬೇಡಿಕೆಗೆ ಅನುಸಾರವಾಗಿ ಆಯಾ ಕಾಲೇಜುಗಳಲ್ಲಿ ಈ ಕೋರ್ಸ್ ಪ್ರಾರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದರು. ಪಿಯುಸಿ ಅರ್ಹತೆ ಹೊಂದಿದ ಕಾನೂನು ವಿದ್ಯಾರ್ಥಿಗಳು ಈ ಕೋರ್ಸಿಗೆ ಪ್ರವೇಶ ಪಡೆಯಬಹುದಾಗಿದೆ. ಅರ್ಹತಾ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಈ ಕೋರ್ಸಿನ ಅವಧಿಯಲ್ಲಿ ಶಾಂತಿ, ಭಾವೈಕ್ಯತೆ, ಭಾತೃತ್ವ, ಮಾನವೀಯತೆ, ಸಹೋದರತ್ವವನ್ನು ಜನರಲ್ಲಿ ಬೆಳೆಸುವುದು, ಗ್ರಾಮೀಣ, ನಗರ ಭಾಗ ಸೇರಿದಂತೆ ಜಾಗತಿಕ ಮಟ್ಟದ ಕಾರ್ಯುಗಾರ, ಶಿಬಿರಗಳನ್ನು ಆಯೋಜಿಸಲಾಗುವುದು. ಈ ವಿಷಯಗಳ ಕುರಿತು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಲು ಪ್ರೇರೇಪಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ.ಬಸವರಾಜು, ಅಂತಾರಾಷ್ಟ್ರೀಯ ಕಾನೂನು ವಿಭಾಗದ ಪ್ರಧಾನ ನಿರ್ದೇಶಕ ಜೇಡನ್ ಲೀ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿ, ಹಸ್ತಾಂತರಿಸಿಕೊಂಡರು.
ವಿವಿ ಮೌಲ್ಯಮಾಪನ ಕುಲಸಚಿವೆ ಪ್ರೊ. ರತ್ನಾ ಭರಮಗೌಡರ, ಎನ್ಜಿಒ ಸಂಸ್ಥೆಯ ಮುಖ್ಯಸ್ಥೆ ಎಲಿಯಾಂಗ್, ಸಿಂಡಿಕೇಟ್ ಸದಸ್ಯರಾದ ವಸಂತ ಲದ್ವಾ, ಡಾ. ಎಚ್.ವಿ.ಬೆಳಗಲಿ, ಎಸ್.ಎನ್. ಪರಾಂಡೆ, ಮೋಹನ ಭಜಂತ್ರಿ, ವಕೀಲರಾದ ಸಾವಿತ್ರಮ್ಮ, ಡಾ.ವಸೀಮ್ ಖಾನ್ ಎಂ.ಐ., ಡಾ. ನಜೀಬುನ್ನೀಸಾ, ಬಿ.ಜಿ. ರವಿಕುಮಾರ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗವಹಿಸಿದ್ದರು.