

ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ತಮಿಳುನಾಡು ಸರ್ಕಾರ, ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಆ್ಯಂಡ್ ಟೆಕ್ನಾಲಾಜಿಕಲ್ ಮ್ಯೂಸಿಯಂ ಬೆಂಗಳೂರು ಸಹಯೋಗದಲ್ಲಿ ಸತ್ಯಭಾಮ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಚೆನ್ನೈನಲ್ಲಿ ಜ.28ರಿಂದ ಫೆ.1ರವರೆಗೆ ಆಯೋಜಿಸಿದ್ದ 33ನೇ ದಕ್ಷಿಣ ಭಾರತ ವಿಜ್ಞಾನ ಮೇಳದಲ್ಲಿ ಬಂಟ್ವಾಳ ಕಾರ್ಮೆಲ್ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ನಿಕಿತಾ ಹಾಗೂ ಹಿತಾಕ್ಷಿ ತಯಾರಿಸಿದ ಮಾದರಿ ಕೇರ್ ಟೇಕರ್ ವಾಕಿಂಗ್ ಸ್ಟಿಕ್ ಈ ಸ್ಪರ್ಧೆಗೆ ಆಯ್ಕೆಗೊಂಡು ನಾಲ್ಕನೇ ಸ್ಥಾನ ಪಡೆದಿದೆ.
ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಪುದುಚೇರಿ ರಾಜ್ಯಗಳಿಂದ 275 ಮಾದರಿಗಳು ಪ್ರದರ್ಶನಗೊಂಡಿದ್ದವು. ಕಾರ್ಮೆಲ್ ಶಾಲೆ ಹತ್ತನೇ ಬಾರಿ ಈ ವಿಜ್ಞಾನ ಮೇಳದಲ್ಲಿ ಭಾಗವಹಿಸಿದೆ. ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಳಚ್ಚಿಲ್‌ನ ಪ್ರೊ.ಸತೀಶ್ ಸಹಕರಿಸಿದ್ದರು. ವಿಜ್ಞಾನ ಶಿಕ್ಷಕ ರೋಶನ್ ಪಿಂಟೊ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮಾದರಿ ತಯಾರಿಸಿದ್ದಾರೆ. ಮುಖ್ಯಶಿಕ್ಷಕಿ ನವೀನಾ ಎ.ಸಿ. ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ವಾಕಿಂಗ್ ಸ್ಟಿಕ್ ವಿಶೇಷವೇನು?
ಅತ್ಯಾಧುನಿಕ ಮನೆಗಳಲ್ಲಿ ನೆಲಕ್ಕೆ ಹಾಸಿರುವ ಗ್ರಾನೈಟ್, ಮಾರ್ಬಲ್, ಟೈಲ್ಸ್‌ಗಳ ಮೇಲೆ ಬಿದ್ದಿರುವ ನೀರು ಗಮನಕ್ಕೆ ಬಾರದೆ ಜಾರಿ ಬೀಳುವ ಸಾಧ್ಯತೆ ಇರುತ್ತದೆ. ನೆಲದ ಮೇಲಿನ ನೀರಿನ ಇರುವಿಕೆಯನ್ನು ಮೊದಲೇ ಮುನ್ಸೂಚಿಸುವ ಈ ವಾಕಿಂಗ್ ಸ್ಟಿಕ್ ಹಿರಿಯ ನಾಗರಿಕರನ್ನು ಅಪಾಯದಿಂದ ರಕ್ಷಿಸುತ್ತದೆ. ಇದೇ ತಂತ್ರಜ್ಞಾನವನ್ನು ಪಾದರಕ್ಷೆಗಳಿಗೂ ಅಳವಡಿಸಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಈ ಮಾದರಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿತ್ತು.