

ಮಡಿಕೇರಿ: ಎಫ್.ಕೆ.ಸಿಸಿಐ(ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡೆಸ್ಟ್ರೀ) ಮತ್ತು ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಜೂ.೧೫ ಮತ್ತು ೧೬ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ದಕ್ಷಿಣ ಭಾರತ ಉತ್ಸವ-೨೦೨೪ ಆಯೋಜಿಸಿದೆ ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಈ ಐದು ರಾಜ್ಯಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ದಕ್ಷಿಣ ಭಾರತ ಉತ್ಸವ ಆಯೋಜಿಸಿದೆ. ಅಲ್ಲದೇ, ಇಂದು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ತೆರಿಗೆ ವ್ಯವಸ್ಥೆ ಇದೆ. ಪ್ರವಾಸಿಗರ ಬಸ್‌ಗಳಿಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಪ್ರವೇಶ ತೆರಿಗೆ ವಿಧಿಸಲಾಗುತ್ತಿದೆ. ಇದು ಐದು ರಾಜ್ಯಗಳಿಗೂ ಸೇರಿದಂತೆ ಏಕರೂಪ ತೆರಿಗೆ ವಿಧಿಸುವಂತೆ ಒತ್ತಾಯಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರವಾಸೋದ್ಯಮ ಬೆಳೆದರೆ ಸರ್ಕಾರಕ್ಕೆ ಆದಾಯ ಹೆಚ್ಚುತ್ತದೆ. ಆ ಭಾಗದಲ್ಲಿ ಹೊಟೇಲ್ ಉದ್ಯಮ ಬೆಳೆಯುತ್ತದೆ. ಹಲವು ಕಾರ್ಯಚಟುವಟಿಕೆ, ವಾಣಿಜ್ಯ ಚಟುವಟಿಕೆ ನಡೆಯುತ್ತದೆ. ಪ್ರವಾಸಿಗಳ ಆತಿಥ್ಯ ಬಹಳ ಮುಖ್ಯ. ಆ ನಿಟ್ಟಿನಲ್ಲಿ ದಕ್ಷಿಣ ಭಾರತ ಉತ್ಸವವನ್ನು ಸರ್ಕಾರ ಮತ್ತು ಎಫ್.ಕೆ.ಸಿ.ಸಿ.ಐ ನೇತೃತ್ವದಲ್ಲಿ ನಡೆಯಲಾಗುತ್ತಿದೆ. ಇದೊಂದು ಬೃಹತ್ ಉತ್ಸವವಾಗಿದೆ. ಇದರಲ್ಲಿ ಎಲ್ಲಾ ರಾಜ್ಯದ ಪ್ರತಿನಿಧಿಗಳು, ಸಚಿವರು ಸೇರಿ ಅನೇಕರು ಪಾಲ್ಗೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಒಂದು ಟಿಕೆಟ್ ಪಡೆದು ಹಲವು ಸ್ಥಳ ನೋಡುವ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಸರ್ಕಾರ ಒಂದೇ ರೀತಿಯ ನಿಮಯ ರೂಪಿಸಬೇಕು. ಮುಂದಿನ ೨೦೨೫ರೊಳಗೆ ಅಂತಿಮ ತೀರ್ಮಾನಕ್ಕೆ ಬರಬೇಕು ಎಂಬುದು ನಮ್ಮ ಉದ್ದೇಶ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ನವೀನ್ ಅಂಬೆಕಲ್, ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ಮಾಜಿ ಅಧ್ಯಕ್ಷ ಬಿ.ಎನ್.ಪ್ರಕಾಶ್, ಪ್ರಮುಖರಾದ ಜಾಹೀರ್ ಅಹಮ್ಮದ್, ಆದರ್ಶ ಉಪಸ್ಥಿತರಿದ್ದರು.