ಜ.9ರಿಂದ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಹೈನುಗಾರಿಕೆ ಶೃಂಗ

dairy meet
Published on

ಬೆಂಗಳೂರು: ದೇಶದ ಹೈನುಗಾರಿಕೆ ಕ್ಷೇತ್ರದ ಪ್ರಾತಿನಿಧಿಕ ಸಂಸ್ಥೆ ಭಾರತೀಯ ಡೇರಿ ಅಸೋಸಿಯೇಷನ್ (ಐಡಿಎ) ಇದೇ ಮೊದಲ ಬಾರಿಗೆ ಪ್ರಾದೇಶಿಕ ಸಮಾವೇಶವಾಗಿ ‘ದಕ್ಷಿಣ ಭಾರತ ಡೇರಿ ಶೃಂಗಸಭೆ’ಯನ್ನು ಬೆಂಗಳೂರಿನಲ್ಲಿ ಗುರುವಾರದಿಂದ 3 ದಿನ ಆಯೋಜಿಸಿದೆ.

ನಗರದ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮೊದಲ ದಿನದ ಉದ್ಘಾಟನಾ ಸಮಾರಂಭವನ್ನು ಭಾರತೀಯ ಡೇರಿ ಸಂಘದ ಮಾಜಿ ಅಧ್ಯಕ್ಷ ಡಾ. ಆರ್.ಪಿ.ಅನೇಜ ಉದ್ಘಾಟಿಸಲಿದ್ದಾರೆ. ಐಡಿಎ ಅಧ್ಯಕ್ಷ ಡಾ. ಆರ್.ಎಸ್.ಸೋಧಿ ಅಧ್ಯಕ್ಷತೆ ವಹಿಸಲಿದ್ದಾರೆ. ಹೈನುಗಾರಿಕೆ ಕ್ಷೇತ್ರದ ವಿವಿಧ ಪಾಲುದಾರರಾದ ರೈತರು, ಹೈನುಗಾರರು, ಸಂಶೋಧಕರು, ಶಿಕ್ಷಣತಜ್ಞರು, ವಿದ್ಯಾರ್ಥಿಗಳು, ಉದ್ಯಮಿಗಳು, ವೃತ್ತಿಪರರು, ಮತ್ತು ಡೇರಿ ಉದ್ಯಮದ ಮುಖ್ಯಸ್ಥರು ಹೀಗೆ ದೇಶದಾದ್ಯಂತ ಸುಮಾರು 1,000 ಪ್ರತಿನಿಧಿಗಳು ಪಾಲ್ಗೊಂಡು ಡೇರಿ ಉದ್ಯಮದ ಬಗ್ಗೆ ವಿಚಾರ ವಿನಿಮಯ ನಡೆಸಲಿದ್ದಾರೆ.

ಎರಡನೇ ದಿನವಾದ ಶುಕ್ರವಾರ ಹೈನುಗಾರಿಕೆ ಕ್ಷೇತ್ರದ 30 ತಜ್ಞರು ಸುಸ್ಥಿರ ಹಾಲು ಉತ್ಪಾದನೆ, ಉದ್ಯಮದ ಎದುರಿಸುತ್ತಿರುವ ಸವಾಲು-ಅವಕಾಶ ಮತ್ತು ಮೌಲ್ಯವರ್ಧನೆ, ಸಾಂಪ್ರದಾಯಿಕ ಡೇರಿ ಉತ್ಪನ್ನಗಳು-ವಿಜ್ಞಾನ ಮತ್ತು ಮಾನದಂಡ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಉದ್ಯಮ, ಶೈಕ್ಷಣಿಕ ಮತ್ತು ನೀತಿ ವಲಯಗಳ ತಜ್ಞರೊಂದಿಗೆ ಪ್ಯಾನಲ್ ಚರ್ಚೆ ಕೂಡ ನಿಗದಿಯಾಗಿದೆ. ಸಂಜೆ ದಕ್ಷಿಣ ಭಾರತದ ಹಿರಿಯ ಹೈನುಗಾರಿಕೆ ಕ್ಷೇತ್ರದ ವೃತ್ತಿಪರರನ್ನು ಗೌರವಿಸಲಾಗುತ್ತದೆ.

ಶನಿವಾರ ನಡೆಯಲಿರುವ ಸಮಾರೋಪದಲ್ಲಿ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಪಾಲ್ಗೊಳ್ಳಲಿದ್ದಾರೆ. ಕೆಎಂಎಫ್​​ ಅಧ್ಯಕ್ಷ ಭೀಮಾ ನಾಯ್ಕ ಹಾಗೂ ದಕ್ಷಿಣ ರಾಜ್ಯಗಳ ಹಾಲು ಉತ್ಪಾದಕ ಸಂಸ್ಥೆಗಳ ಪ್ರಮುಖರು ಭಾಗಿಯಾಗಲಿದ್ದಾರೆ. ಇದೇ ವೇಳೆ ಕರ್ನಾಟಕ, ಕೇರಳ ಸೇರಿ ಐದೂ ರಾಜ್ಯಗಳಿಗೆ ಸೇರಿದ ತಲಾ ಒಬ್ಬ ಮಹಿಳಾ ಹೈನು ಸಾಧಕಿಯನ್ನು ಸನ್ಮಾನಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net