

ಚಿಕ್ಕಬಳ್ಳಾಪುರ: ಆಗ್ನೇಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಒಂದೆಡೆ ಸದ್ದಿಲ್ಲದೇ ಪ್ರಚಾರ ಪ್ರಾರಂಭವಾಗಿದ್ದರೆ, ಮತ್ತೊಂದೆಡೆ ಚುನಾವಣಾ ಆಯೋಗವು ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿದೆ.
ಈಗಾಗಲೇ ಕರಡು ಪಟ್ಟಿ, ಆಕ್ಷೇಪಣೆ, ಪರಿಷ್ಕರಣೆ, ಅಂತಿಮ ಪಟ್ಟಿ ಪ್ರಕಟಣೆಗೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ನಿಯೋಜಿತ ಅಧಿಕಾರಿಗಳ ಮಾಹಿತಿಯ ಅಧಿಸೂಚನೆ ಹೊರಡಿಸಲಾಗಿದೆ.
ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ದಾವಣಗೆರೆ (ಹರಿಹರ, ಜಗಳೂರು, ದಾವಣಗೆರೆ ತಾಲೂಕುಗಳು) ಜಿಲ್ಲೆಗಳು ಬರುತ್ತವೆ. ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾನ್ ಮತದಾರ ನೋಂದಣಾಧಿಕಾರಿಯಾಗಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಕೆಎಎಸ್ ಅಧಿಕಾರಿಗಳು, ಪೌರಾಯುಕ್ತರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಸಹಾಯಕ ಮತದಾರ ನೋಂದಣಾಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಅಗತ್ಯ ದಾಖಲೆಗಳೊಂದಿಗೆ ನಮೂನೆ ೧೮ ರ ಮೂಲಕ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಪದವಿ ಶಿಕ್ಷಣ ಪೂರೈಸಿದ ಅರ್ಹರು ಅರ್ಜಿ ಸಲ್ಲಿಸಬಹುದು.
*ಮತದಾರ ಪಟ್ಟಿ ಪರಿಷ್ಕರಣೆ
ಚುನಾವಣೆಯ ಆಕಾಂಕ್ಷಿಗಳು, ಪಕ್ಷದ ಹಿರಿಯ ಪದಾಧಿಕಾರಿಗಳು ನಾನಾ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪದವೀಧರರನ್ನು ಹುಡುಕುತ್ತಿದ್ದು ಅರ್ಹರಿಂದ ದಾಖಲೆಗಳನ್ನು ಪಡೆದುಕೊಂಡು ಚುನಾವಣಾಧಿಕಾರಿಗಳಿಗೆ ಸಲ್ಲಿಸಲು ಮಾರ್ಗದರ್ಶನ ನೀಡಲಾಗುತ್ತಿದೆ. ಆದಷ್ಟು ಆಯಾ ವ್ಯಾಪ್ತಿಯಲ್ಲಿ ಮತದಾರರನ್ನು ಗುರುತಿಸಲು ಪಕ್ಷದ ಕಾರ್ಯಕರ್ತರಿಗೆ ಆದೇಶಿಸಿದ್ದು ಈ ನಿಟ್ಟಿನಲ್ಲಿ ಆಯಾ ವ್ಯಾಪ್ತಿಯಲ್ಲಿ ಮತದಾರ ಪಟ್ಟಿ ವಿಚಾರ ಚರ್ಚೆಗೆ ಪೂರ್ವಭಾವಿ ಸಭೆಗಳು ನಡೆಯುತ್ತಿವೆ.
*ಅರ್ಜಿ ಸ್ವೀಕಾರ ಪ್ರಕ್ರಿಯೆ
ಆಗ್ನೇಯ ಪದವೀಧರ ಕ್ಷೇತ್ರದ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ದಿನದಿಂದ ದಿನಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ೧ ವಾರದಲ್ಲಿ ೫೦೦ ಹೆಚ್ಚು ಅರ್ಜಿಗಳು ಸ್ವೀಕಾರಗೊಂಡಿವೆ. ಮುಂಬರುವ ದಿನಗಳಲ್ಲಿ ಪ್ರಮಾಣ ಮತ್ತಷ್ಟು ಹೆಚ್ಚಳವಾಗಲಿದೆ. ಇವುಗಳ ಪರಿಶೀಲಿಸಿದ ಬಳಿಕ ಮೊದಲಿಗೆ ಕರಡು ಪಟ್ಟಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ಹಾಗೆಯೇ ನಿಗದಿತ ದಿನಕ್ಕೆ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಮತದಾರ ಪಟ್ಟಿ ಪರಿಷ್ಕರಣೆ ಹಂತ
ಸೆ.೧೨ ಮತದಾರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ ಪ್ರಕಟಣೆ
ನ.೨೫ ಕರಡು ಮತದಾರ ಪಟ್ಟಿ ಪ್ರಕಟಣೆ
ಡಿ.೧೦ ರವರೆಗೆ ಆಕ್ಷೇಪಣೆಗಳ ಸ್ವೀಕಾರ
ಡಿ.೩೧ ಕ್ಕೆ ಅಂತಿಮ ಮತದಾರ ಪಟ್ಟಿ ಪ್ರಕಟಣೆ
೨೦೨೬ ಜೂನ್ ನಲ್ಲಿ ಚುನಾವಣೆ ನಿರೀಕ್ಷೆ