

ಚಿಟಗುಪ್ಪ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನ ಹಂಚಿಕೆಯಲ್ಲಿ ದಕ್ಷಿಣ ಕ್ಷೇತ್ರಕ್ಕೆ ತಾರತಮ್ಯವಾಗಿದೆ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೂಡಲೇ ಸರಿಪಡಿಸುವ ಅಗತ್ಯವಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಮೀನಕೇರಾ ಕ್ರಾಸ್ ಹತ್ತಿರದ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ದಕ್ಷಿಣ ಮಂಡಲ ಕಾರ್ಯಕಾರಿಣಿ ಸಭೆ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿದ ಅವರು, ಮಂಡಳಿಯಿಂದ ಜಿಲ್ಲೆಯಲ್ಲೇ ದಕ್ಷಿಣ ಕ್ಷೇತ್ರಕ್ಕೆ ಅತಿ ಕಮ್ಮಿ ಅನುದಾನ ಬರುತ್ತಿದೆ. ಹೀಗಾಗಿ ಕೇವಲ ಹಳ್ಳಿಗಳಿಂದ ಕೂಡಿದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ವರ್ಷ ಕೆಕೆಆರ್‌ಡಿಬಿಯಿಂದ ದಕ್ಷಿಣ ಕ್ಷೇತ್ರಕ್ಕೆ ೨೪ ಕೋಟಿ, ಪ್ರಸಕ್ತ ವರ್ಷ ೨೮ ಕೋಟಿ ರೂ. ಬಂದಿದೆ. ಆದರೆ ಪಕ್ಕದ ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿ ಕ್ಷೇತ್ರಗಳಿಗೆ ೬೦ ಕೋಟಿಗಿಂತ ಅಧಿಕ ಅನುದಾನ ಬಂದಿದೆ. ನಮಗೇಕೆ ಅನ್ಯಾಯ ಎಂದು ಪ್ರಶ್ನಿಸಿದರು.
ನಂಜುಂಡಪ್ಪ ಸಮಿತಿ ವರದಿ ಪ್ರಕಾರ ಹಿಂದುಳಿದ, ಅತಿ ಹಿಂದುಳಿದ ಕ್ಷೇತ್ರಗಳಿಗೆ ಕೆಕೆಆರ್‌ಡಿಬಿಯಿಂದ ಅನುದಾನ ಹಂಚಿಕೆ ನಡೆದಿದೆ. ಮುಂಚೆ ಬೀದರ್ ದಕ್ಷಿಣ ಕ್ಷೇತ್ರ ಇರಲಿಲ್ಲ. ೨೦೦೮ರಲ್ಲಿ ಉದಯಿಸಿದೆ. ಇದಕ್ಕೂ ಮುಂಚೆ ನಂಜುಂಡಪ್ಪ ವರದಿ ನೀಡಿದೆ. ಬೀದರ್ ನಗರ ಒಳಗೊಂಡ ಹಿಂದಿನ ಮಾನದಂಡದಂತೆ ಈಗ ಅನುದಾನ ಹಂಚಿಕೆ ಮಾಡುತ್ತಿದ್ದರಿಂದ ನಮ್ಮ ಕ್ಷೇತ್ರಕ್ಕೆ ಕಮ್ಮಿ ಹಣ ಬಂದು ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ. ಈ ಮಾನದಂಡ ಬದಲಿಸಿ ತಾರತಮ್ಯ ನಿವಾರಣೆ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿದೆ ಎಂದರು.
ಕ್ಷೇತ್ರದಲ್ಲಿ ತಳಮಟ್ಟದಿಂದ ಪಕ್ಷದ ಸಂಘಟನೆ ಮಾಡಲು ನಿರಂತರ ಪ್ರಯತ್ನ ನಡೆದಿದೆ. ಕಳೆದ ಸಲ ಅಭಿಯಾನ ವೇಳೆ ೫೦ ಸಾವಿರ ಸದಸ್ಯತ್ವ ಮಾಡಲಾಗಿತ್ತು. ಈ ಬಾರಿ ೭೫ ಸಾವಿರ ಸದಸ್ಯತ್ವದ ಗುರಿಯಿದೆ. ಅತಿ ಹೆಚ್ಚು ಸದಸ್ಯತ್ವ ಮಾಡಿದ ಬೂತ್ ಪ್ರಮುಖರಿಗೆ ತಿರುಪತಿ ತಿಮ್ಮಪ್ಪನ ದರ್ಶನದ ವ್ಯವಸ್ಥೆ ಮಾಡುವುದಾಗಿ ಕಾರ್ಯಕರ್ತರನ್ನು ಡಾ.ಬೆಲ್ದಾಳೆ ಹುರಿದುಂಬಿಸಿದರು.
ಪಕ್ಷದ ಸಂಘಟನೆ ಹಾಗೂ ಸದಸ್ಯತ್ವ ಅಭಿಯಾನ ಕುರಿತು ಮಂಡಲ ಉಸ್ತುವಾರಿ ಪೀರಪ್ಪ ಔರಾದೆ ಮಾಹಿತಿ ನೀಡಿದರು. ರಾಷ್ಟ್ರೀಯ ಮಹಿಳಾ ಮೋರ್ಚಾ ಸದಸ್ಯೆ ಶಕುಂತಲಾ ಬೆಲ್ದಾಳೆ, ಮಂಡಲ ನಿಕಟಪೂರ್ವ ಅಧ್ಯಕ್ಷ ರಾಜರೆಡ್ಡಿ ಶಾಬಾದ್ ಮಾತನಾಡಿದರು.
ಮಂಡಲ ಅಧ್ಯಕ್ಷ ಗುರುನಾಥ ರಾಜಗೀರಾ ಬಗದಲ್ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಉಸ್ತುವಾರಿ ಸೂರ್ಯಕಾಂತ ಚಿಲ್ಲಾಬಟ್ಟೆ, ಜಿಲ್ಲಾ ಉಪಾಧ್ಯಕ್ಷ ಪ್ರಭುಶೆಟ್ಟಿ ಮೆಂಗಾ, ಖಜಾಂಚಿ ಹಣಮಂತರಾವ ಪಾಟೀಲ್, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಸದಾನಂದ ಜೋಶಿ, ಜಿಲ್ಲಾ ಮಾಧ್ಯಮ ಸಂಚಾಲಕ ಗುರುನಾಥ ರಾಜಗೀರಾ, ಜಿಲ್ಲಾ ಕಾರ್ಯದರ್ಶಿ ಮಾಣಿಕಪ್ಪ ಖಾಶೆಂಪುರ, ಪ್ರಮುಖರಾದ ಹೇಮಾ ತುಕ್ಕಾರೆಡ್ಡಿ, ಬಾಬುರಾವ ಮಲ್ಕಾಪುರೆ, ಜಗನ್ನಾಥ ಜಮಾದಾರ, ಸಂತೋಷರಡ್ಡಿ ಆಣದೂರ, ಶಿವಕುಮಾರ ಪಾಟೀಲ್ ಬೇಮಳಖೇಡ, ರಾಜಕುಮಾರ ಪೋಳಾ, ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ಶಿವಕುಮಾರ ಸ್ವಾಮಿ ಬಂಬಳಗಿ, ಸಂತೋಷಿ ನಿಡವಂಚಾ, ಶ್ರೀನಿವಾಸ ಪತ್ತಾರ, ಸುರೇಶ ಮಾಶೆಟ್ಟಿ ಇತರರಿದ್ದರು.
ನೂತನವಾಗಿ ಆಯ್ಕೆಯಾದ ಕ್ಷೇತ್ರ ಮಂಡಲದ ವಿವಿಧ ಮೋರ್ಚಾ ಪದಾಧಿಕಾರಿಗಳಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.
ರಾಷ್ಟ್ರೀಯತೆ, ರಾಷ್ಟ್ರವಾದ, ಸಶಕ್ತ ಭಾರತ ಕಟ್ಟುವುದು ಬಿಜೆಪಿ ಚಳವಳಿ. ೨೦೪೭ರಲ್ಲಿ ವಿಕಸಿತ ಭಾರತ, ವಿಶ್ವಗುರು ಭಾರತ ನಿರ್ಮಾಣವೇ ಪಕ್ಷದ ಏಕೈಕ ಗುರಿ. ೨೦ ಕೋಟಿ ಸದಸ್ಯರ ಮೂಲಕ ವಿಶ್ವದಲ್ಲೇ ಅತಿ ದೊಡ್ಡ ಪಕ್ಷ ನಮ್ಮದು. ಇದಕ್ಕೆಲ್ಲ ಕಾರ್ಯಕರ್ತರ ಅವಿರತ ಶ್ರಮವೇ ಕಾರಣ.
| ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ
ದೇಶದ ಹಿತ, ಸಶಕ್ತ ಭಾರತ ನಿರ್ಮಾಣ ಹಾಗೂ ವಿಶ್ವಕ್ಕೆ ಬೆಳಕು ತೋರಿಸುವ ಶಕ್ತಿ ಸಾಮರ್ಥ್ಯ ಭಾರತಕ್ಕೆ ಮಾತ್ರ ಇದೆ. ದೇಶ ವಿರೋಧಿ ಹೇಳಿಕೆ ಕೊಡುವ ಕೆಲಸ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಸಮಾಜಘಾತುಕ ಶಕ್ತಿಗಳ ಪರವಾಗಿ ಕಾಂಗ್ರೆಸ್ ನಿಲ್ಲುತ್ತಿರುವುದು ಆತಂಕಕಾರಿ ಬೆಳವಣಿಗೆ. ಹೀಗಾಗಿ ದೇಶ ಮಜಬೂತ್ ಆಗಬೇಕಾದರೆ ಕಾಂಗ್ರೆಸ್‌ಮುಕ್ತ ಸಮಾಜದ ಅಗತ್ಯವಿದೆ.
| ಸೂರ್ಯಕಾಂತ ಚಿಲ್ಲಾಬಟ್ಟೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಕ್ಷೇತ್ರ ಉಸ್ತುವಾರಿ