

ಮಂಗಳೂರು: ಸೌತ್ ಇಂಡಿಯಾ ಮಾಸ್ಟರ್ಸ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ 2025, ಜನವರಿ 10 ರಿಂದ 12 ತನಕ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ‘ಸೌತ್ ಏಶಿಯಾ ಮಾಸ್ಟರ್ಸ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿದ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ
ಬಾಂಗ್ಲಾದೇಶ, ನೇಪಾಳ, ಬೂತಾನ್, ಶ್ರೀಲಂಕಾ ಸಹಿತ ದೇಶ ವಿದೇಶಗಳ 30 ರಿಂದ 85 ವರ್ಷ ಒಳಗಿನ ಸುಮಾರು 2000 ಅಧಿಕ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಭಾಗವಹಿಸುವ ಕ್ರೀಡಾಪಟುಗಳ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಶ್ರೀಲಂಕಾದಿಂದ 200 ಕ್ರೀಡಾಪಟುಗಳು ಬರುವುದನ್ನು ಈಗಾಗಲೇ ದೃಢಪಡಿಸಿದ್ದಾರೆ ಎಂದು ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಅವರು ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ರೀಡಾಕೂಟದ ಪೂರ್ವ ತಯಾರಿಯ ಮೇಲ್ವಿಚಾರಣೆ, ನಿರ್ವಹಣೆಯನ್ನು ಸಂಘದ ಗೌರವಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮಾಡಲಿದ್ದಾರೆ. ಸಂಘದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಅವರ ಮಾರ್ಗದರ್ಶನ ಹಾಗೂ ಸೂಚನೆಯಂತೆ ಈ ಚಾಂಪಿಯನ್‌ಶಿಪ್ ನಡೆಯಲಿದೆ ಎಂದರು.
ಭಾಗವಹಿಸುವ ಹೊರ ರಾಜ್ಯದ ಕ್ರೀಡಾಪಟುಗಳಿಗೆ ಉಚಿತ ವಸತಿ ಹಾಗೂ ಎಲ್ಲಾ ಕ್ರೀಡಾಪಟುಗಳಿಗೆ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಭಾಗವಹಿಸುವ ಸ್ಪರ್ಧಿಗಳು 9845572512ನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು. ಈಗಾಗಲೇ ನೋಂದಣಿ ಆರಂಭಗೊಂಡಿದ್ದು, ನವೆಂಬರ್ 15ರವರೆಗೆ ಅವಕಾಶವಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಉಪಾಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ, ಗೌರಿ ಶಂಕರ್, ಕೋಶಾಧಿಕಾರಿ ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.