

ಸಾಗರ: ಜಾನಪದ ಕಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು ಅದರ ಮೂಲಮಟ್ಟವನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಆಗಬೇಕು ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು.
ಗುರುಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಆಯೋಜಿಸಿದ್ದ ಕಲಿಯೋಣ ಜಾನಪದ ತರಬೇತಿಗೆ ಚಾಲನೆ ನೀಡಿ ಮಾತನಾಡಿ, ಬದುಕಿನ ಜತೆಯಲ್ಲಿಯೇ ಬೆಳೆದು ಬಂದಿರುವ ಜಾನಪದ, ಬದುಕು ಕಟ್ಟುವ ಜತೆಗೆ ಕಲೆಯನ್ನು ಕಾಪಾಡಿಕೊಂಡು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಜಾನಪದ ಅಧ್ಯಯನದತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಸಂಗತಿ. ತಮ್ಮ ನೋವು-ನಲಿವುಗಳನ್ನು ದಾಖಲಿಸಲು ಜನಪದಿಯರು ಈ ಕಲೆಯನ್ನು ಕರಗತ ಮಾಡಿಕೊಂಡಿದ್ದು, ಇಂದು ವಿಶ್ವಮಾನ್ಯವಾಗಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ಆಧುನಿಕತೆಯ ಸಂಗೀತ, ನೃತ್ಯದ ಅಬ್ಬರದ ನಡುವೆಯೂ ನಮ್ಮ ಜಾನಪದ ಕಲೆ ತನ್ನ ಶ್ರೇಷ್ಠತೆಯಿಂದ ಹಿಂದೆ ಸರಿದಿಲ್ಲ. ಪಾಶ್ಚಾತ್ಯ ಕಲೆಗಳತ್ತ ಒಲವು ತೋರುತ್ತಿರುವ ಯುವ ಜನಾಂಗಕ್ಕೆ ಜಾನಪದದ ಮಹತ್ವ ತಿಳಿಸಿ ಕೊಡುವ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕು ಎಂದು ಹೇಳಿದರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸತ್ಯನಾರಾಯಣ ಶಿರವಂತೆ ಅಧ್ಯಕ್ಷತೆ ವಹಿಸಿದ್ದರು. ಎಂ.ವೈ.ಮೂರ್ತಿ, ಹೂವಪ್ಪ, ಭಾಗಿರಥಿ, ವಸಂತ ಕುಗ್ವೆ, ಉಮೇಶ್ ಹಿರೇನೆಲ್ಲೂರು, ಎಸ್.ಬಸವರಾಜ್, ಸರೋಜಮ್ಮ, ಡಾ. ಪ್ರಸನ್ನ, ನಾರಾಯಣ ಮೂರ್ತಿ ಕಾನುಗೋಡು ಇತರರಿದ್ದರು.