

ಗಂಗಾವತಿ: ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ನಗರದ ಬಾಲಕಿಯರ ಎಂಎನ್‌ಎಂ ಪಿಯು ಕಾಲೇಜಿನ ಪ್ರೌಢ ಶಾಲೆ ವಿಭಾಗದ ಉಪಪ್ರಾಚಾರ್ಯ ಕೃಷ್ಣಪ್ಪರನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಬಿಇಒ ಕಚೇರಿ ಮುಂದೆ ಪ್ರತಿಭಟಿಸಿ, ಬಿಇಒ ವೆಂಕಟೇಶರಾಮಚಂದ್ರಪ್ಪರಿಗೆ ಬುಧವಾರ ಮನವಿ ಸಲ್ಲಿಸಿದರು.
ಉಪಪ್ರಾಚಾರ್ಯ ಕರ್ತವ್ಯ ದಿನದಲ್ಲಿನ ಆರೋಪಗಳ ಪಟ್ಟಿಯೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಸಲ್ಲಿಸಿದರು. ತಾಲೂಕು ಘಟಕದ ಅಧ್ಯಕ್ಷ ಜಡಿಯಪ್ಪ ಹಂಚಿನಾಳ್ ಮಾತನಾಡಿ, ಉಪಪ್ರಾಚಾರ್ಯ ಕರ್ತವ್ಯ ಅವಧಿಯಲ್ಲಿ ವಿನಾಕಾರಣ ಸಹನೆ ಕಳೆದುಕೊಳ್ಳುತ್ತಿದ್ದು, ಆಡಳಿತ ನಿರ್ವಹಣೆಗಿಂತ ಗೊಂದಲಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.
ಬಿಸಿಯೂಟ ವ್ಯವಸ್ಥೆ ಸೇರಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಗಮನಹರಿಸದ ಉಪಪ್ರಾಚಾರ್ಯ, ಪುಸ್ತಕ ಸಮರ್ಪಕ ವಿತರಿಸಿಲ್ಲ. ಹಲವು ಆರೋಪಗಳನ್ನು ಹೊಂದಿರುವ ಉಪ ಪ್ರಾಚಾರ್ಯರನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ಕೃಷ್ಣಮೆಟ್ರಿ, ಚಂದ್ರು ನಿಸರ್ಗ, ದುರ್ಗೇಶ್ ಹೊಸಳ್ಳಿ, ರಾಘು ಕಡೆಬಾಗಿಲು, ಪಂಪಾಪತಿ ಕುರಿ, ರಾಮಣ್ಣರುದ್ರಾಕ್ಷಿ, ಬಸವರಾಜ ಕೊರಮ್ಮ ಕ್ಯಾಂಪ್ ಇತರರಿದ್ದರು.