ಚಿತ್ರರೂಪಸಿ ಧ್ವನಿಸಾಂದ್ರಿಕೆ ಲೋಕಾರ್ಪಣೆ

ಚಹಿ
Published on

ಬೆಂಗಳೂರು: ಬಾಗೂರು ಕಲಾವೇದಿಕೆ ಟ್ರಸ್ಟ್ ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕವಿ, ಕಲಾವಿದ ಬಾಗೂರು ಮಾರ್ಕಂಡೇಯ ರಚನೆಯ ‘ಚಿತ್ರರೂಪಸಿ’ ಧ್ವನಿಸಾಂದ್ರಿಕೆಯನ್ನು ದೂರದರ್ಶನದ ಬಿ. ಪಿ. ರುದ್ರೇಶ್ ಬಾಬು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ಪ್ರತಿಭಾನ್ವಿತ ಕಲಾವಿದನಿಗೆ ಹಲವು ತೊಂದರೆಗಳು ಇದ್ದರೂ ತನ್ನ ಪ್ರತಿಭೆಯಿಂದ ಸಮಾಜಕ್ಕೆ ಒಳಿತನ್ನೇ ಮಾಡುತ್ತಾನೆ ಎನ್ನುವುದಕ್ಕೆ ಬಾಗೂರರು ಉದಾಹರಣೆ. ಶಿಕ್ಷಣ ಇಲಾಖೆಗೆ ಮಾಡಿಕೊಟ್ಟ ‘ಕನ್ನಡ ಸೌರಭ’ ಕಾರ್ಯಕ್ರಮ ಅತ್ಯಂತ ಮಹತ್ವದ್ದು ಎಂದರು.

ಸಾಂಸ್ಕೃತಿಕವಾಗಿ ಸದಾ ತೊಡಗಿಕೊಂಡು ಸತತವಾಗಿ ಕಾರ್ಯ ನಿರ್ವಹಿಸುವ ಬಾಗೂರು ಕಲಾವೇದಿಕೆ ನಿಜಕ್ಕೂ ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿರುವುದನ್ನು ಗಮನಿಸಿದ್ದೇನೆ. ಇತ್ತೀಚೆಗೆ ಗಾಯಕರು ತಮ್ಮ ಗೀತೆ ಹಾಡಿ ಬೇರೆಯವರ ಗೀತೆಗಳನ್ನು ಕೇಳದೆ ಹೋಗುವುದು ನಿಲ್ಲಬೇಕು. ಬಾಗೂರರ ಗೀತೆಗಳು ನಿಜವಾಗಿ ಪ್ರೀತಿ ಪ್ರೇಮ ಪ್ರಕೃತಿಯ ಗೀತೆಗಳಾಗಿವೆ ಹಾಗೂ ಮಧುರವಾಗಿವೆ ಎಂದು ಡಾ. ಜಯಶ್ರೀ ಅರವಿಂದ್ ಹೇಳಿದರು.

ಎಸಿಪಿ ಕೆ ಎನ್. ರಮೇಶ್ ಮಾತನಾಡಿ ಕಲಾವಿದರ ಜತೆ ಇರುವುದು ನಿಜವಾದ ಭಾಗ್ಯ. ಇಂತಹ ಕಲಾವಿದರ ಕವಿಗಳ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು. ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಉಪಸ್ಥಿತರಿದ್ದರು. ಖ್ಯಾತ ಗಾಯಕ ರವಿ ಮೂರೂರು ಬಾಗೂರರ ಗೀತೆಗಳನ್ನು ಹಾಡಿದರು. ಕಲಾಭೂಷಣ ಪ್ರಶಸ್ತಿ ಸ್ವೀಕರಿಸಿದ ಪೆಮುದೆ ಮೋಹನ್​ಕುಮಾರ್ ಭಾವುಕರಾಗಿ ಪ್ರಶಸ್ತಿ ಹಣವನ್ನು ಸಂಸ್ಥೆಗೆ ಹಿಂದಿರುಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net