

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಹೈಟೆಕ್ ಶಸ್ತ್ರ ಚಿಕಿತ್ಸಾ ಸೌಲಭ್ಯ ಒಳಗೊಂಡಿರುವ ‘ಸಾಕು ಪ್ರಾಣಿಗಳ ಸೂಪರ್ ಸ್ಪೆಷಾಲಿಟ್’ ಆಸ್ಪತ್ರೆಯು ಬೆಳಗಾವಿ ನಗರದಲ್ಲಿ ಏ.27ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೋಲಮೇಟ್ಸ್ ವೆಟ್ ಆಸ್ಪತ್ರೆಯ ಸಂಸ್ಥಾಪಕಿ ಡಾ.ವಿಜಯಲಕ್ಷ್ಮೀ ಕುಲಗೊಡ ತಿಳಿಸಿದರು.
ಬೆಳಗಾವಿ ಆಯೋಧ್ಯ ನಗರದಲ್ಲಿರುವ ಸೋಲಮೇಟ್ಸ್ ವೆಟ್ ಆಸ್ಪತ್ರೆಯ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬೆಂಗಳೂರು ಮತ್ತು ಬೆಳಗಾವಿ ಮಹಾನಗರದಲ್ಲಿಯೇ ಅತಿ ಹೆಚ್ಚು ವಿವಿಧ ತಳಿಗಳ ಶ್ವಾನ, ಬೆಕ್ಕು, ಪಕ್ಷಿ ಸಾಕಲಾಗುತ್ತಿದೆ. ಆದರೆ, ಈ ಸಾಕು ಪ್ರಾಣಿಗಳಿಗೆ ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ಆಸ್ಪತ್ರೆ ಸೌಲಭ್ಯ ಇಲ್ಲ. ಹೀಗಾಗಿ ಸಾಕು ಪ್ರಾಣಿಗಳ ಮಾಲೀಕರು ಚಿಕಿತ್ಸೆಗಾಗಿ ಅಲೆದಾಡುತ್ತಿದ್ದಾರೆ. ಕೆಲ ವೇಳೆ ಚಿಕಿತ್ಸೆ ಸಿಗದೇ ಅದೇಷ್ಟೋ ಪ್ರಾಣಿಗಳು ಮೃತಪಟ್ಟಿವೆ. ಈ ಹಿನ್ನೆಲೆ ಬೆಳಗಾವಿ ನಗರದಲ್ಲಿ ಸಾಕು ಪ್ರಾಣಿಗಳ ಸೂಪರ್ ಸ್ಪೆಷಾಲಿಟ್ ಆಸ್ಪತ್ರೆ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರು ಬಿಟ್ಟರೆ ಬೆಳಗಾವಿಯಲ್ಲಿ ಮಾತ್ರ: ಸೋಲಮೇಟ್ಸ್ ವೆಟ್ ಸಾಕುಪ್ರಾಣಿ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸಾ ವಿಭಾಗ, ಪ್ರಯೋಗಾಲಯ, ರಕ್ತ ತಪಾಸಣೆ ವಿಭಾಗ, ಔಷಧ ವಿಭಾಗ, ತುರ್ತು ಘಟಕ, ಆಹಾರ ವಿಭಾಗ ಹೀಗೆ ವಿವಿಧ ವಿಭಾಗ ಹೊಂದಿದೆ. ಈ ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳ ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಸಾಕು ಪ್ರಾಣಿಗಳನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಬರಲು ವಾಹನ ವ್ಯವಸ್ಥೆ ಮಾಡಲಾಗುತ್ತಿದೆ. ಇಷ್ಟು ಹೈಟೆಕ್ ಸೌಲಭ್ಯ ಹೊಂದಿರುವ ಆಸ್ಪತ್ರೆ ಬೆಂಗಳೂರು ಬಿಟ್ಟರೆ ಬೆಳಗಾವಿಯಲ್ಲಿರುವುದು ವಿಶೇಷ ಎಂದರು.
ಸೋಮೇಟ್ಸ್ ವೆಟ್ ಸಂಸ್ಥಾಪಕ ಡಾ.ಶಶಿಕಾಂತ ಕುಲಗೊಡ ಮಾತನಾಡಿ, ಬೆಳಗಾವಿ ಮಹಾನಗರದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಶ್ವಾನ, ಬೆಕ್ಕು, ಪಕ್ಷಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಆದರೆ, ಅವುಗಳಿಗೆ ತುರ್ತು ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದಾರೆ. ಈ ಸಮಸ್ಯೆ ಹೋಗಲಾಡಿಸಬೇಕು, ಪ್ರಾಣಿಗಳಿಗೂ ಸೂಕ್ತ ಚಿಕಿತ್ಸೆ ಸೌಲಭ್ಯ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ನಗರದಲ್ಲಿ ಸಾಕು ಪ್ರಾಣಿಗಳ ಸೂಪರ್ ಸ್ಪೆಷಾಲಿಟ್ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ ಎಂದು ಹೇಳೀದರು. ಡಾ.ಅನಿಲಕುಮಾರ ಜಾಮಿ, ರೂಪಾ ತಳವಾರ ಇತರರಿದ್ದರು.
ಬೆಳಗಾವಿ ಆಯೋಧ್ಯ ನಗರದಲ್ಲಿರುವ ಸೋಲಮೇಟ್ಸ್ ವೆಟ್ ಆಸ್ಪತ್ರೆಯು ಏ.27ರಂದು ಬೆಳಗ್ಗೆ 11 ಗಂಟೆಗೆ ಪಶು ವೈದ್ಯಕೀಯ ಶಸ್ತ್ರ ಚಿಕಿತ್ಸಕ ಡಾ.ಜಿ.ಪಂಪಾಪತಿ ಉದ್ಘಾಟಿಸಲಿದ್ದಾರೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ರಾಜೀವ ಕುಳೆರ, ಪಶುವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉಪನಿರ್ದೇಶಕ ಡಾ.ಶಶಿಧರ ನಾಡಗೌಡ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥಾಪಕಿ ಡಾ.ವಿಜಯಲಕ್ಷ್ಮೀ ಕುಲಗೊಡ ತಿಳಿಸಿದರು.