

ದೇವದುರ್ಗ: ಜೀವನದಲ್ಲಿ ಜಿಗುಪ್ಸೆ ಹೊಂದಿದ ವ್ಯಕ್ತಿ ಆತ್ಮವಿಶ್ವಾಸ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಾನೆ. ಜಗತ್ತಿನಲ್ಲಿ ಪ್ರತಿವರ್ಷ 8ಲಕ್ಷ ಜನರು ಜೀವ ಕಳೆದುಕೊಳ್ಳುತ್ತಾರೆ. ಅಂಥವರಿಗೆ ಆತ್ಮವಿಶ್ವಾಸ ತುಂಬಿ ಜೀವನ ಬದಲಿಸಬೇಕಿದೆ ಎಂದು ವೈದ್ಯಾಧಿಕಾರಿ ನಿರ್ಮಲಾದೇವಿ ಹೇಳಿದರು.
ಇದನ್ನೂ ಓದಿ: ಆತ್ಮಹತ್ಯೆ ತಡೆಗೆ ಜಾಗೃತಿ ಅವಶ್ಯ
ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯಲ್ಲಿ ಶುಕ್ರವಾರ ಮಾತನಾಡಿದರು. ಎಂಟು ಲಕ್ಷ ಜನರಲ್ಲಿ ಭಾರತದ ಶೇ.17ರಷ್ಟು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಖೇದಕರ. ಪ್ರತಿಯೊಬ್ಬ ವ್ಯಕ್ತಿ ಸಮಾಜದ ಭಾಗವಾಗಿದ್ದು, ಎಲ್ಲರ ರಕ್ಷಣೆ ನಮ್ಮ ಹೊಣೆಯಾಗಬೇಕು. ನೊಂದ ವ್ಯಕ್ತಿಗೆ ಧೈರ್ಯ ತುಂಬಿ, ಸಾಂತ್ವನ ಮಾತುಗಳನ್ನು ಹೇಳಿ ಜೀವನದಲ್ಲಿ ಭರವಸೆ ಮೂಡಿಸಬೇಕು.
ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ವ್ಯಕ್ತಿ ಅತಿಹೆಚ್ಚು ಏಕಾಂಗಿತನ, ವಿಷಯಗಳನ್ನು ಮುಚ್ಚಿಡುವುದು ಹಾಗೂ ಮದ್ಯಪಾನ, ಮಾದಕ ವಸ್ತುಗಳ ಸೇವನೆ ಮಾಡುವವರು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುತ್ತಾರೆ. ಹೀಗಾಗಿ ನಾವು ನಮ್ಮ ಸುತ್ತಮುತ್ತಲಿನ ಕಷ್ಟದಲ್ಲಿರುವ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದರು.
ಮನೋರೋಗ ತಜ್ಞ ಡಾ.ಅರುಣ್ ಕುಮಾರ್ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಪ್ರಾಚಾರ್ಯೆ ಲೀಲಾಮೃತ, ಉಪನ್ಯಾಸಕರಾದ ಕೊಂಡಾರೆಡ್ಡಿ, ಜಿತೇಂದ್ರ, ಪವನ್ ಕುಮಾರ್, ಶರತ್, ಆಶಾ ಕಾರ್ಯಕರ್ತೆ ನಾಗಮ್ಮ ಇತರರಿದ್ದರು.