ಸೌಜನ್ಯ ಪ್ರಕರಣ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಮುತಾಲಿಕ ಆಗ್ರಹ

Published on

ಹುಬ್ಬಳ್ಳಿ: ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಲಕ್ಷಣಗಳು ಕಂಡು ಬರುತ್ತಿವೆ. ಈ ಕೇಸ್ ನಲ್ಲಿ ಹಲವು ಸಂಶಯಗಳು ಚರ್ಚೆಗೆ ಗ್ರಾಸವಾಗಿವೆ. ರಾಜ್ಯ ಸರ್ಕಾರ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಸಮಗ್ರ ತನಿಖೆ ನಡೆಸಬೇಕು ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿ ತಾಲೂಕಿನಲ್ಲಿ ದಶಕದಲ್ಲಿ ಆತ್ಮಹತ್ಯೆ, ಮಹಿಳಾ ದೌರ್ಜನ್ಯ ಸೇರಿ 434 ಪ್ರಕರಣಗಳು ದಾಖಲಾಗಿವೆ. ಎಲ್ಲ ಪ್ರಕರಣಗಳನ್ನು ವಿಶೇಷ ಮಹಿಳಾ ಸಮಿತಿ ರಚಿಸಿ ಮರು ತನಿಖೆ ಮಾಡಿಸಬೇಕು ಎಂದರು.

ಕಳೆದೊಂದು ವಾರದಲ್ಲಿ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಆಘಾತಕಾರಿ ಅಂಶಗಳು ಬಯಲಿಗೆ ಬಂದಿವೆ. ಮೂರು ವರ್ಷದಲ್ಲಿ 40 ಸಾವಿರ ಹೆಣ್ಣು ಮಕ್ಕಳ ಕಾಣೆ ಪ್ರಕರಣ ದಾಖಲಾಗಿವೆ. 45 ಸಾವಿರ ಅಪ್ರಾಪ್ತೆಯರು ಗಭಿರ್ಣಿಯಾಗಿದ್ದಾರೆ. ದೇಶದಲ್ಲಿ 13 ಲಕ್ಷ ಮಹಿಳೆಯರು ಕಾಣೆಯಾಗಿದ್ದಾರೆ. ಈ ವಿಚಾರವನ್ನು ರಾಜ್ಯ ಸರ್ಕಾರ, ಸಮಾಜ, ಸಂಟನೆಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಕಾಣೆಯಾದವರಲ್ಲಿ ಲವ್ ಜಿಹಾದ್ ಪ್ರಕರಣಗಳಿವೆ. ಅಪ್ರಾಪ್ತ ಮಕ್ಕಳ ರಕ್ಷಣೆ, ಮಹಿಳೆಯರ ಸುರಕ್ಷತೆಗೆ ವಿಶೇಷ ಪಡೆ ರಚಿಸಬೇಕು. ಸೌಜನ್ಯಾ ಹಾಗೂ ಹೋರಾಟಗಾರ ಮಹೇಶ ತಿಮ್ಮರೋಡಿ ಮನೆಗೆ ಭದ್ರತೆ ನೀಡಬೇಕು. ಬೆಳ್ತಂಗಡಿಯಲ್ಲಿ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿ ಹೋರಾಟಗಾರರಿಗೆ ಬೆದರಿಕೆಗಳು ಬರುತ್ತಿವೆ. ಈ ಬಗ್ಗೆಯೂ ಆಗಬೇಕು ಎಂದರು.

ಈ ಎಲ್ಲ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಹುಬ್ಬಳ್ಳಿಯಿಂದಲೇ ಹಿಂದು ಕಾರ್ಯಕರ್ತರನ್ನು ಒಗ್ಗೂಡಿಸಿ ಹೋರಾಟ ನಡೆಸುತ್ತೇವೆ. ಬಡ ಮಕ್ಕಳ ನೋವು ಮಂತ್ರಿಗಳಿಗೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಣೇಶ ಪ್ರತಿಷ್ಠಾಪನೆ: ಹುಬ್ಬಳ್ಳಿಯ ನಗರದ ಚನ್ನಮ್ಮ ಮೈದಾನದಲ್ಲಿ ಈ ವರ್ಷವೂ ಶಾಸೊಕ್ತವಾಗಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ನಡೆಯಲಿದೆ. ಎಷ್ಟು ದಿನ ಪ್ರತಿಷ್ಠಾಪಿಸಬೇಕು ಎಂಬುದನ್ನು ಶ್ರೀದಲ್ಲೇ ನಿರ್ಧಾರ ಮಾಡಲಾಗುವುದು. ಯಾರು ವಿರೋಧ ಮಾಡ್ತಾರೋ ನೋಡುತ್ತೇವೆ ಎಂದು ಮುತಾಲಿಕ ಗುಡುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net