ಜ್ಞಾನಿಗಳಿಗೆ ವಿಶ್ವದ ಎಲ್ಲೆಡೆ ಮಾನ್ಯತೆ, ಗೌರವ ಲಭ್ಯ

31 TNP Swamiji
ತಿ ನರಸೀಪುರ ಸೋಸಲೆ ಮಠದಲ್ಲಿ ಶನಿವಾರ ಸಂಜೆ ಮೈಸೂರಿನ ಹಿರಿಯ ವಿದ್ವಾನ್ ಆದ್ಯ ಗೋವಿಂದಾಚಾರ್ಯರು ಸುಧಾಮ ಚರಿತ್ರೆ ಎಂಬ ಹರಿಕಥೆ ನಡೆಸಿದರು. ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು.
Published on

ವ್ಯಾಸರಾಜರ ಮಠಾಧೀಶ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಅಭಿಮತ
ತಿ.ನರಸೀಪುರ: ದೇವರು ಜ್ಞಾನ ಆಸಕ್ತರನ್ನು, ವಿದ್ಯ ವಿಷಯದ ಹಸಿವು ಇರುವವರನ್ನು ಸದಾ ಅನುಗ್ರಹಿಸುತ್ತಾನೆ. ಹಾಗಾಗಿ ಜ್ಞಾನಿಗೆ ವಿಶ್ವದ ಎಲ್ಲೆಡೆ ಮಾನ್ಯತೆ ಇರುತ್ತದೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ನುಡಿದರು.
ಸೋಸಲೆ ಗ್ರಾಮದ ಶ್ರೀ ಮಠದಲ್ಲಿ 8ನೇ ಚಾತುರ್ಮಾಸ್ಯ ವ್ರತದಲ್ಲಿರುವ ಅವರು, ಬೆಂಗಳೂರಿನ ಶ್ರೀ ಸರ್ವಜ್ಞ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ 2 ದಿನಗಳ ಶ್ರೀ ಜಗನ್ನಾಥ ದಾಸರ ಹರಿಕಥಾಮೃತಸಾರದ ಪ್ರಧಾನ ಪ್ರಮೇಯಗಳನ್ನು ಶಾಸ್ತ್ರ ಗ್ರಂಥಗಳ ಆಧಾರದಿಂದ ವಿವರಿಸುವ ವಿಶೇಷ ಜ್ಞಾನ ಸತ್ರಕ್ಕೆ ಶನಿವಾರ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದರು.ಲೌಕಿಕ ವಿಚಾರಗಳನ್ನು ಕೊಂಚ ಬದಿಗೆ ಇರಿಸಿ ನಾವುಗಳು ತತ್ವ ಜ್ಞಾನದ ಶ್ರವಣ, ಮನನ ಮತ್ತು ನಿಧಿ ಧ್ಯಾಸನದಲ್ಲಿ ಆಸಕ್ತರಾದರೆ ಜೀವನ ಸಾರ್ಥಕ ವಾಗಲಿದೆ ಎಂದು ಅವರು ಹೇಳಿದರು.
ಹರಿ ಕಥಾಮೃತಸಾರ ಗ್ರಂಥ ಜನ ಸಾಮಾನ್ಯರಿಗೂ ಸರಳವಾಗಿ ಅರ್ಥವಾಗುವ ಕನ್ನಡದ ಕೃತಿ. ದೈವಿಕ ಆಸಕ್ತರನ್ನು ಪಾರಮಾರ್ಥಿಕ ವಿಚಾರಗಳತ್ತ ಸಾಗುವಂತೆ ಮಾಡುವ ವಿಶೇಷ ಪದ್ಯಗಳ ರಚನೆ ಅದರಲ್ಲಿ ಇದೆ. ಇದರ ಪ್ರಧಾನ ಪ್ರಮೇಯಗಳನ್ನು ಶಾಸ್ತ್ರ ಗ್ರಂಥಗಳ ಆಧಾರದಿಂದ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಜ್ಞಾನ ಸತ್ರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಜಗನ್ನಾಥದಾಸರ ಸೇವೆ ದೊಡ್ಡದು: ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ಹಿರಿಯ ವಿದ್ವಾಂಸ ಡಾ.ಎ.ವಿ. ನಾಗಸಂಪಿಗೆ ಆಚಾರ್ಯ ಪ್ರಸ್ತಾವಿಕವಾಗಿ ಮಾತನಾಡಿ, ದ್ವೈತ ಮತ ಸಿದ್ಧಾಂತಿ ಆಚಾರ್ಯ ಮಧ್ವರ ಮತ್ತು ಅವರ ಸಂದೇಶಗಳನ್ನು ಕನ್ನಡದಲ್ಲಿ ತಿಳಿಸಿಕೊಡುವ ನಿಟ್ಟಿನಲ್ಲಿ ಹರಿ ಕಥಾಮೃತ ಸಾರ ಮಹತ್ವದ ಕಾರ್ಯ ಮಾಡಿದೆ. ಈ ದಿಸೆಯಲ್ಲಿ ದಾಸ ಪರಂಪರೆಯ ಜಗನ್ನಾಥದಾಸರ ಸಾಹಿತ್ಯ ಜ್ಞಾನ ಮತ್ತು ವಿಚಾರ ಪ್ರತಿಪಾದನೆ ಪರಮೋಚ್ಛವಾಗಿದೆ ಎಂದರು. ದಾಸರ ಕೊಡುಗೆಯನ್ನು ವಿದ್ವತ್ ಪ್ರಪಂಚ ಸದಾ ಸ್ಮರಣೆ ಮಾಡಿಕೊಳ್ಳುತ್ತದೆ ಎಂದವರು ನುಡಿದರು. ಮೊದಲನೇ ಗೋಷ್ಠಿಯಲ್ಲಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಬದರಿನಾಥ ಆಚಾರ್ಯ "ಬ್ರಹ್ಮ ಸ್ವರೂಪ' ಎಂಬ ವಿಷಯವನ್ನು ಮಂಡಿಸಿದರು. ಪರಬ್ರಹ್ಮನಾದ ಹರಿಯು ಅನಂತ ಕಲ್ಯಾಣ ಗುಣಪೂರ್ಣನಾಗಿದ್ದಾನೆ. ಅವನನ್ನು ವೇದಗಳಿಂದ ಹಾಗೂ ವೇದಾನು ಸಾರಿ ಬ್ರಹ್ಮಸೂತ್ರಾದಿಗಳಿಂದ ಮಾತ್ರ ಸರಿಯಾಗಿ ತಿಳಿಯಲು ಸಾಧ್ಯ. ಈ ವಿಷಯವನ್ನು ಮೊದಲು ಲೋಕಕ್ಕೆ ತಿಳಿಸಿಕೊಟ್ಟವರೇ ಶ್ರೀ ಮಧ್ವಾಚಾರ್ಯರು. ಹಾಗಾಗಿ ಅವರನ್ನು "ಪೂರ್ಣಪ್ರಜ್ಞರು' ಎಂದು ಲೋಕ ಕೋಂಡಾಡಿತು ಎಂದರು.
ವೇದಗಳು ಪರಮಾತ್ಮನನ್ನು ಸಮಗ್ರವಾಗಿ ತಿಳಿಸುತ್ತವೆ: .ಎರಡನೇ ಗೋಷ್ಠಿಯಲ್ಲಿ ಮೈಸೂರಿನ ವ್ಯಾಸತೀರ್ಥ ವಿದ್ಯಾಪೀಠದ ಯುವ ವಿದ್ವಾಂಸ ಪ್ರಣವಾಚಾರ್ಯ ಮಾತನಾಡಿದರು. ಅನಂತವಾದ ವೇದಗಳು ಪರಮಾತ್ಮನನ್ನು ಸಮಗ್ರವಾಗಿ ತಿಳಿಸುತ್ತವೆ. ಭಗವಂತನ ಅಧೀನವಾದ ಜೀವಿಗಳು ಭಗವದ್ ಅನುಗ್ರಹದಿಂದ ಮಾತ್ರ ಸುಸ್ಥಿರವಾಗಿರಲು ಸಾಧ್ಯ ಎಂದು ಹೇಳಿದರು.ಮೂರನೇ ಗೋಷ್ಠಿಯಲ್ಲಿ ಪಂಡಿತ ಕಳಸಾಪುರ ಶ್ರೀಕಾಂತ ಆಚಾರ್ಯ ಧ್ಯಾನದ ಸೋಪಾನಗಳ ಬಗ್ಗೆ ತಿಳಿಸಿರುವ ಪ್ರಮೇಯಗಳನ್ನು ಶ್ರುತಪಡಿಸಿದರು. ನಾಲ್ಕನೇ ಗೋಷ್ಠಿಯಲ್ಲಿ ವಿದ್ವಾನ್ ಸುಘೋಷ ಆಚಾರ್ಯ ಹರಿ ಕಥಾಮೃತ ಸಾರ ಕೃತಿಯ ಕರುಣಾಸಂಧಿಯ ವಿಶೇಷ ವಿಷಯಗಳನ್ನು ಪ್ರತಿಪಾದಿಸಿದರು. ಕರುಣಾಸಾಗರನಾದ ಶ್ರೀಹರಿಯು ತನ್ನ ಭಕ್ತರನ್ನು ಕರುಣಾಪೂರ್ಣ ದೃಷ್ಟಿಯಿಂದ ಅನುಗ್ರಹಿಸುತ್ತಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಪಂಡಿತರಾದ ಪಾಂಡುರಂಗ ಮಾಧವಾಚಾರ್ಯರು ಕೃತಿಯಲ್ಲಿರುವ "ಸರ್ವ ಸ್ವಾತಂತ್ರ್ಯ ಸಂಧಿ' ವಿಶ್ಲೇಷಣೆ ಮಾಡಿದರು. ನೂರಾರು ಭಕ್ತರು ಹಾಜರಿದ್ದರು. ನಂತರ ಮೈಸೂರಿನ ಹಿರಿಯ ವಿದ್ವಾಂಸ ಆದ್ಯ ಗೋವಿಂದಾಚಾರ್ಯರು ಸುಧಾಮ ಚರಿತ್ರೆ - ಹರಿಕಥೆ ನಡೆಸಿಕೊಟ್ಟು ಶ್ರೋತೃಗಳ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net