

ಶಿಕಾರಿಪುರ: ತಾಲೂಕಿನಾದ್ಯಂತ ಸಾಂಸ್ಕೃತಿಕ ಭವನ, ಆಡಳಿತ ಸೌಧ, ತಾಪಂ ಸಭಾಂಗಣ, ಎಪಿಎಂಸಿ, ಕೋರ್ಟ್ ಸೇರಿದಂತೆ ಪ್ರತಿ ಇಲಾಖೆಗಳ ಕಟ್ಟಡಗಳೂ ಅತ್ಯಂತ ಸುಸಜ್ಜಿತವಾಗಿವೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಗುರುಭವನ ಮಾತ್ರ ದಿನೇದಿನೆ ಶಿಥಿಲಗೊಳ್ಳುತ್ತಿದೆ.
ಶಿಕ್ಷಕರ ಕಾರ್ಯಚಟುವಟಿಕೆಗಳಿಗಾಗಿ ರಾಜ್ಯದ ಪ್ರತಿ ತಾಲೂಕಿನಲ್ಲಿಯೂ ಒಂದೊಂದು ಗುರುಭವನಗಳಿದ್ದರೆ ಶಿಕಾರಿಪುರ ಮತ್ತು ಶಿರಾಳಕೊಪ್ಪದಲ್ಲಿ ಎರಡು ಗುರುಭವನ ಇರುವ ಹೆಗ್ಗಳಿಕೆ ಇಲ್ಲಿಯದು. ಶಿಕಾರಿಪುರದ ಗುರುಭವನ ಪಟ್ಟಣದ ಹೃದಯ ಭಾಗದಲ್ಲಿಯೇ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದೆ. ಆದರೆ ಕಟ್ಟಡ ಹಾಳಾಗಿ ಮೇಲಿನ ಅಂತಸ್ತಿನ ಸಿಮೆಂಟು ಉದುರುತ್ತ್ತಿದೆ. ವಿದ್ಯುತ್ ವ್ಯವಸ್ಥೆ ಹಾಳಾಗಿದೆ, ಶೌಚಗೃಹವಂತೂ ಕಟ್ಟಿಕೊಂಡಿದೆ. 60*100 ಅಡಿ ಜಾಗದಲ್ಲಿ ದಶಕಗಳ ಹಿಂದೆ ಅಂದಿನ ಡಿಡಿಪಿಐ ರಾಮಲಿಂಗಪ್ಪ ಅವರು ಶಿಕಾರಿಪುರ ತಾಲೂಕಿನ ಕುಸ್ಕೂರಿನವರೇ ಆದ್ದರಿಂದ ತಾಲೂಕಿನ ಶಿಕ್ಷಕರ ಒಂದು ತಿಂಗಳ ಸಂಬಳ ಕೂಡಿಸಿ ಶಿಕಾರಿಪುರ ಮತ್ತುಶಿರಾಳಕೊಪ್ಪದಲ್ಲಿ ಎರಡು ಗುರುಭವನ ನಿರ್ಮಿಸಿದ್ದರು. ಶಿರಾಳಕೊಪ್ಪ ಗುರುಭವನ ಚೆನ್ನಾಗಿಯೇ ಇದೆ. ಆದರೆ ಶಿಕಾರಿಪುರ ಗುರುಭವನ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಯಾವುದೇ ಕಾರ್ಯಕ್ರಮ ಮಾಡಿದರೂ ಮೇಲೆ ಹತ್ತಲು ಮತ್ತು ಇಳಿಯಲು ಮೆಟ್ಟಿಲುಗಳು ಅತ್ಯಂತ ಕಿರಿದಾಗಿವೆ. ಒಳಗೆ ಸಭಾಂಗಣದಲ್ಲಿ ಎಕೋ ಬರುವುದರಿಂದ ಮಾತನಾಡಿದ್ದು ಕೇಳಲ್ಲ.
ಈಗ ಕೆಲ ವರ್ಷಗಳ ಹಿಂದೆ ಮೇಲಂತಸ್ತು ಸೋರುತ್ತಿರುವುದರಿಂದ ಏಳೆಂಟು ಲಕ್ಷ ರೂ. ಖರ್ಚುಮಾಡಿ ತಗಡು ಹಾಕಿ ಸಣ್ಣ ಪುಟ್ಟ ರಿಪೇರಿ ಮಾಡಲಾಗಿತ್ತು. ಆದರೆ ಈಗ ಸಂಪೂರ್ಣ ಹೊಸ ಕಟ್ಟಡವನ್ನೇ ನಿರ್ಮಿಸುವುದು ಉತ್ತಮ ಎನಿಸುತ್ತಿದೆ. ಇದ್ದುದರಲ್ಲಿ ಕೆಳ ಅಂತಸ್ತು ಪರವಾಗಿಲ್ಲ ಎನಿಸಿದರೂ ಅದೂ ಜೀರ್ಣಾವಸ್ಥೆಯನ್ನು ಕಾಣುತ್ತಿದೆ. ಜತೆಗೆ ಕೆಳ ಅಂತಸ್ತನ್ನು ಶಾಲೆಗಳಿಗೆ ಸರಬರಾಜಾಗುವ ಪಠ್ಯಪುಸ್ತಕಗಳನ್ನಿಡಲು ಬಳಸಲಾಗುತ್ತಿದೆ ಎನ್ನುತ್ತಾರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ಪ್ರಕಾಶ್ ಮತ್ತು ಜಿಲ್ಲಾ ಗೌರವಾಧ್ಯಕ್ಷ ಬಿ.ಆರ್.ಮಂಜಪ್ಪ.