

ಶಿರಸಿ: ತಾಲೂಕಿನ ಬನವಾಸಿ ಮಧುಕೇಶ್ವರ ದೇವಾಲಯದಲ್ಲಿ ಮಳೆ ನೀರು ಸೋರಿಕೆ ಪ್ರಮಾಣ ಜಾಸ್ತಿಯಾಗಿದೆ. ದೇವಾಲಯದ ಗರ್ಭಗುಡಿಗೆ ತಾಡಪತ್ರೆ ಅಳವಡಿಸಿದ್ದರಿಂದ ಆ ಭಾಗ ಹೊರತುಪಡಿಸಿ ಉಳಿದೆಲ್ಲ ಕಡೆ ಕಾಲು ಜಾರುವ ಸ್ಥಿತಿ ಉಂಟಾಗಿದೆ.
ಇಲ್ಲಿಯ ಆರಾಧ್ಯ ದೈವ ಮಧುಕೇಶ್ವರ ದೇವಾಲಯ ನೋಡಲು ರಾಜ್ಯದ ಮೂಲೆ ಮೂಲೆಯಿಂದಲೂ ಜನ ಬರುತ್ತಾರೆ. ಆದರೆ, ಬಂದವರಿಗೆ ಇಲ್ಲಿಯ ವ್ಯವಸ್ಥೆಗಳನ್ನು ನೋಡಿದರೆ ದಿಗಿಲಾಗುವಂತಿದೆ. ಶಿಲೆಗಳಿಂದಲೇ ನಿರ್ವಿುತ ಮಧುಕೇಶ್ವರ ದೇವಾಲಯ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸೋರುತ್ತಿದೆ. ಮಳೆಯ ನೀರು ಹರಿದು ಇಡೀ ಮಂಟಪ ಪಾಚಿಗಟ್ಟಿದೆ.
15 ವರ್ಷಗಳ ಹಿಂದೆ ಚಾವಣಿಯ ಸಂದುಗಳಿಗೆ ಗಾರೆ ಹಾಕಿ ರಿಪೇರಿ ಮಾಡಲಾಗಿತ್ತು. ಕೆಲ ವರ್ಷಗಳ ಬಳಿಕ ಮತ್ತೆ ಸೋರಲಾರಂಭಿಸಿದೆ. 2023ರಲ್ಲಿ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ಹಾವೇರಿ ವಿಭಾಗದ ಸಿಬ್ಬಂದಿ ದೇವಾಲಯದ ಗರ್ಭ ಗುಡಿಗೆ ತಾತ್ಕಾಲಿಕವಾಗಿ ತಾಡಪತ್ರಿ ಅಳವಡಿಸಿದ್ದರು. ಉಳಿದಂತೆ ದುರಸ್ತಿ ಕಾರ್ಯ ನಡೆಸಿಲ್ಲ. ಪ್ರವೇಶದ್ವಾರದ ಬಳಿಯ ಮಂಟಪವಂತೂ ಶಿಥಿಲಗೊಂಡು ಈಗಲೋ ಆಗಲೋ ಬೀಳುವಂತಿದೆ. ಇದೇ ರೀತಿ ಮುಂದುವರಿದರೆ ಇಡೀ ಸಮುಚ್ಚಯ ಹಾಳು ಕೊಂಪೆಯಂತಾಗುತ್ತದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವಾಲಯದ ಒಳಗಡೆ ಕಲ್ಲಿನ ಬೆಂಚುಗಳ ಮೇಲೆ ಕುಳಿತುಕೊಳ್ಳಲೂ ಸಾಧ್ಯವಾಗುತ್ತಿಲ್ಲ.
ಮಳೆಗಾಲದಲ್ಲಿ ಸೋರುವಿಕೆ ತಡೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಶಾಸಕ ಶಿವರಾಮ ಹೆಬ್ಬಾರ ರಿಪೇರಿಗೆ ಅನುದಾನ ಮಂಜೂರು ಮಾಡಿಸಿದ್ದಾರೆ ಎನ್ನುತ್ತಾರೆ ಪುರಾತತ್ವ ಇಲಾಖೆಯ ಸ್ಥಳೀಯ ನೌಕರ ಕಿರಣ ಭಟ್.
ದೇವಾಲಯ ದುರಸ್ತಿಗೆ 45 ಲಕ್ಷ ರೂ. ಮಂಜೂರಾಗಿದೆ. ಪುರಾತತ್ವ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ, ಚುನಾವಣೆ ನೀತಿ ಸಂಹಿತೆ ಕಾರಣ ರಿಪೇರಿಗೆ ಹಿನ್ನಡೆಯಾಗಿದೆ. ಮಳೆಗಾಲ ಮುಕ್ತಾಯವಾದ ಬಳಿಕ ರಿಪೇರಿ ನಡೆಸಬಹುದು. ಈಗ ಚಾವಣಿಯ ಸಂದುಗಳಿಂದ ನೀರು ಒಳಬರುತ್ತಿದ್ದು, ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆ ಆಗುತ್ತಿಲ್ಲ. | ರಾಜಶೇಖರ ಒಡೆಯರ್, ಮಧುಕೇಶ್ವರ ದೇವಾಲಯ ಅಧ್ಯಕ್ಷ