

ವಿಜಯವಾಣಿ ಸುದ್ದಿಜಾಲ ಕೋಟ
ಸಾಲಿಗ್ರಾಮ ಪ.ಪಂ.ವ್ಯಾಪ್ತಿಯ ಕಾರ್ಕಡ ಗುಂಡ್ಮಿ ಪಾರಂಪಳ್ಳಿ ಚಿತ್ರಪಾಡಿ ಗ್ರಾಮ ಆಡಳಿತಾಧಿಕಾರಿ ಕಚೇರಿ ಅಭಿವೃದ್ಧಿಗೊಳ್ಳದೆ ಕಳೆದ ಕೆಲವು ವರ್ಷಗಳಿಂದ ಐಸಿಯುನಲ್ಲಿ ಕಾರ್ಯಭಾರ ಮಾಡುತ್ತಿದೆ. 100 ಸಂವತ್ಸರಕ್ಕೂ ಅಧಿಕ ಕಾಲ ಸಾಲಿಗ್ರಾಮ ಪ.ಪಂ. ಸನಿಹದ ಪ.ಪಂ.ಅಧೀನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪರಿಹಾರ ನೀಡುವ ಕಚೇರಿ ಕಟ್ಟಡದ ಸ್ಥಿತಿಗತಿ ಶೋಚನೀಯವಾಗಿದೆ. ಸರ್ಕಾರಿ ಕಚೇರಿ ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕಾದ ಕಾಲಘಟ್ಟದಲ್ಲಿ ಸ್ವಂತ ಸೂರು ಕೂಡ ಇಲ್ಲದಿರುವುದು ವಿಪರ್ಯಾಸವೇ ಸರಿ. ಪ್ರಸಕ್ತ ಕಚೇರಿಯಲ್ಲಿ ಗ್ರಂಥಾಲಯ, ಪಶು ಇಲಾಖೆ ಸೇರಿದಂತೆ ಅನೇಕ ಇಲಾಖೆಗಳು ಕಾರ್ಯಭಾರ ಮಾಡಿರುವುದು ಇದೀಗ ಇತಿಹಾಸ. 900 ಚದರ ಅಡಿ ವಿಸ್ತೀರ್ಣದ ನೂರು ವರ್ಷಗಳ ಈ ಹಳೆಯ ಕಟ್ಟಡವನ್ನು ಸ್ಥಳೀಯಾಡಳಿತ ತಮ್ಮ ಅನುದಾನದಡಿ ಅಭಿವೃದ್ಧಿಗೊಳಿಸಬೇಕು ಎಂಬುದು ಗ್ರಾಮಸ್ಥರ ಕೂಗಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ನಂತರ ಈಗಿನ ಪ.ಪಂ. ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಪ್ರಸ್ತುತವಿರುವ ಕಟ್ಟಡ ಹಂಚಿನ ಹಾಸುಗಳಿಂದ ಕೂಡಿದ್ದು, ಮರದ ಮೋಪುಗಳು ಅಳಿವಿನಂಚಿಗೆ ತಲುಪಿವೆ. ಮಳೆಗಾಲದಲ್ಲಿ ಸೋರುತ್ತಿದ್ದು, ಅಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಇಲಾಖೆ ಕಡತಗಳು ಹಾನಿಗೊಳ್ಳುವ ಆತಂಕ ವ್ಯಕ್ತವಾಗಿವೆ. ಇನ್ನೊಂದೆಡೆ ಅಧಿಕಾರಿಗಳಿಗೆ ಅಥವಾ ಗ್ರಾಮಸ್ಥರಿಗೆ ಜೀವಕ್ಕೆ ಅಪಾಯ ಎದುರಾಗಬಹುದು. ಇಲಾಖೆ ಅಥವಾ ಸ್ಥಳೀಯಾಡಳಿತ ವಿಶೇಷ ಮುತುವರ್ಜಿಯಲ್ಲಿ ಅಭಿವೃದ್ಧಿಗೊಳಿಸಬೇಕು. ಹಾಗಾದರೆ ನಿರಾತಂಕವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂಬುದು ಸಾರ್ವಜನಿಕ ಅಭಿಪ್ರಾಯ.
ರಾಷ್ಟ್ರೀಯ ಹೆದ್ದಾರಿ 66ರ ಸಾಲಿಗ್ರಾಮ ಪ.ಪಂ. ಸಮೀಪದಲ್ಲಿ ಬಹಳ ವರ್ಷದಿಂದ ಕಾರ್ಯನಿವಹಿಸುತ್ತಿದ್ದ ಕಾರ್ಕಡ ಗುಂಡ್ಮಿ ಪಾರಂಪಳ್ಳಿ ಚಿತ್ರಪಾಡಿ ಗ್ರಾಮ ಆಡಳಿತಾಧಿಕಾರಿ ಕಚೇರಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಪ.ಪಂ.ಹಿಂಭಾಗದ ಹಳೇ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಕಳೆದ 15 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ಹಳೇ ಹಂಚಿನ ಕಟ್ಟಡ ಆಗಿರುವುದರಿಂದ ಶಿಥಿಲಾವಸ್ಥೆ ಕಟ್ಟಡವಾಗಿದ್ದು, ನೀರು ಸೋರುವಿಕೆ ಮತ್ತು ಇನ್ನಿತರ ಸಮಸ್ಯೆಯಿಂದ ಸಾರ್ವಜನಿಕ ಸೇವೆಗೆ ತೊಂದರೆ ಮತ್ತು ಕಡತಗಳ ರಕ್ಷಣೆ ಕಷ್ಟ ವಾಗುತ್ತಿದ್ದು, ಸಾಲಿಗ್ರಾಮ ಪ.ಪಂ. ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಸಹಕರಿಸಿ 4ಗ್ರಾಮಗಳ ಜನರಿಗೆ ಅನುಕೂಲವಾಗಲು ಸಹಕಾರ ನೀಡುವಂತೆ ವಿನಂತಿ ಮಾಡುತ್ತೇವೆ. -ಎನ್.ಪಿ.ಹರೀಶ್, ಗ್ರಾಮ ಆಡಳಿತಾಧಿಕಾರಿ ಗ್ರಾಮ ಆಡಳಿತ ಕಚೇರಿ ನವೀಕರಿಸುವ ಕುರಿತು ಈಗಾಗಲೇ ತಹಸೀಲ್ದಾರ್ ಸಮ್ಮುಖದಲ್ಲಿ ಭೇಟಿ ನೀಡಿ ಪರಿಶೀಲಿಸಲಾಗಿದೆ ಅಲ್ಲದೆ ಈಗಾಲೇ ಇಂಜಿನಿಯರ್ ಮೂಲಕ ನೀಲನಕ್ಷೆ ಸಿದ್ಧಪಡಿಸಲು ಸೂಚಿಸಲಾಗಿದ್ದು ಪ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಅಭಿವೃದ್ಧಿಗೊಳಿಸಲಾಗಿವುದು. -ಅಜಯ್ ಭಂಡಾರ್ಕರ್, ಮುಖ್ಯಾಧಿಕಾರಿ ಪ.ಪಂ.ಸಾಲಿಗ್ರಾಮ ಕಂದಾಯ ಇಲಾಖೆ ಕಾರ್ಯನಿರ್ವಹಿಸುವ ಗ್ರಾಮ ಆಡಳಿತ ಕಚೇರಿ ಕಟ್ಟಡ ಶಿಥಿಲಾವಸ್ಥೆಯಲ್ಲೆ ಕಾರ್ಯನಿರ್ವಹಿಸುವುದು ಸೂಕ್ತವಲ್ಲ ಬದಲಾಗಿ ಅದನ್ನು ಪ್ರಸ್ತುತ ವ್ಯವಸ್ಥೆಗೆ ಅನುಗುಣವಾಗಿ ಶೀಘ್ರದಲ್ಲಿ ಅಭಿವೃದ್ಧಿಗೊಳಿಸಬೇಕು ಎಂಬುದು ಗ್ರಾಮಸ್ಥರ ಪರವಾಗಿ ಬೇಡಿಕೆ. -ನಾಗರಾಜ್ ಗಾಣಿಗ ಸಾಲಿಗ್ರಾಮ, ಸಾಮಾಜಿಕ ಕಾರ್ಯಕರ್ತರು https://www.vijayavani.net/nidhi-pai-becomes-first-for-the-state-in-sslc https://www.vijayavani.net/mla-pays-tribute-to-brahmavara-warrior