

ನಂಜನಗೂಡು: ಕತ್ತು ಕೊಯ್ದು ನಿಗೂಢವಾಗಿ ಕೊಂದ ಬಳಿಕ ವಾಮಾಚಾರ ಕಥೆ ಹೆಣೆದು ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ಕಿಲಾಡಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಅಕ್ರಮ ಸಂಬಂಧಕ್ಕೆ ಹಿನ್ನೆಲೆಯಲ್ಲಿ ಪತ್ನಿ ತನ್ನ ಬಾಯ್‌ಫ್ರೆಂಡ್‌ಗಳೊಂದಿಗೆ ಸೇರಿ ಪತಿಯನ್ನು ಭೀಕರವಾಗಿ ಕೊಂದು ವಾಮಾಚಾರಕ್ಕೆ ಬಲಿಯಾದಂತೆ ಬಿಂಬಿಸಿದವಳು ಈಗ ಸಿಕ್ಕಿ ಬಿದ್ದಿದ್ದಾಳೆ. ಕೊಲೆಯಾದ ಸದಾಶಿವ ಎಂಬಾತನ ಪತ್ನಿ ರಾಜೇಶ್ವರಿ (35), ಆಕೆಯ ಸ್ನೇಹಿತರಾದ ಶಿವಯ್ಯ (33) ಹಾಗೂ ರಂಗಸ್ವಾಮಿ (38)ಬಂಧಿತರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಂತೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಅವರ ಉಸ್ತುವಾರಿಯಲ್ಲಿ ಡಿವೈಎಸ್ಪಿ ರಘು ಹಾಗೂ ಹುಲ್ಲಹಳ್ಳಿ ಮನೋಜ್ ಕುಮಾರ್, ಪಿಎಸ್‌ಐ ಚೇತನ್‌ಕುಮಾರ್ ನೇತೃತ್ವದ ತಂಡ ಬೆನ್ನತ್ತಿದಾಗ ಹಂತಕರು ಸಿಕ್ಕಿಬಿದ್ದಿದ್ದಾರೆ.
ಘಟನೆ ವಿವರ: ಅ.18 ರಂದು ಹುಲ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಡುವಿನಹಳ್ಳಿ ಸರ್ಕಾರಿ ಶಾಲೆ ಬಳಿ ಸದಾಶಿವ (48)ಎಂಬಾತನ ಮೃತದೇಹ ಪತ್ತೆಯಾಗಿತ್ತು. ಅತನ ಕತ್ತು ಕೊಯ್ದು ಬಿಸಾಡಲಾಗಿತ್ತು. ಮೃತದೇಹದ ಸಮೀಪದಲ್ಲಿ ನಿಂಬೆಹಣ್ಣು, 101 ರೂ. ಹಾಗೂ ಅರಿಶಿಣ-ಕುಂಕುಮವೂ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ವಾಮಾಚಾರ ನಡೆಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ಬಿಂಬಿಸಲಾಗಿತ್ತು.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಬ್ಬಂದಿ ರಸೂಲ್ ಪಾಗೇವಾಲ, ಸತೀಶ್, ಅಬ್ದುಲ್ ಲತೀಫ್, ಭಾಸ್ಕರ್, ಅಶೋಕ್, ಶಿವಕುಮಾರ್, ದೊಡ್ಡಯ್ಯ, ಆಶಾ ಹಾಗೂ ಶ್ರೀದೇವಿ ಅವರನ್ನೊಳಗೊಂಡ ತಂಡವನ್ನು ಕೊಲೆಗಡುಕರ ಪತ್ತೆಗೆ ರಚಿಸಲಾಗಿತ್ತು.
ನಿಗೂಢ ಕೊಲೆಯ ರಹಸ್ಯ ಭೇದಿಸಿದ ನಂಜನಗೂಡು ಖಾಕಿ ಪಡೆ ಹಂತಕರ ಸಂಚನ್ನು ಬಯಲು ಮಾಡಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಸದಾಶಿವನನ್ನು ಪತ್ನಿ ರಾಜೇಶ್ವರಿ ತನ್ನ ಬಾಯ್‌ಫ್ರೆಂಡ್‌ಗಳ ಜತೆ ಸೇರಿ ಕೊಂದು ನಂತರ ವಾಮಾಚಾರಕ್ಕೆ ಬಲಿಯಾದಂತೆ ಬಿಂಬಿಸಿದ್ದಳು. ತನಿಖೆಯಲ್ಲಿ ಕೊಲೆ ಕಾರಣ ತಿಳಿಸಿದ ಪತ್ನಿ ರಾಜೇಶ್ವರಿ ಹಾಗೂ ಆಕೆ ಸ್ನೇಹಿತರು ಇದೀಗ ಕಂಬಿ ಎಣಿಸುತ್ತಿದ್ದಾರೆ.