ಮೈಸೂರಿನಲ್ಲಿ ಗಮನ ಸೆಳೆದ ಸೊಪ್ಪು ಮೇಳ

11
Published on

ಮೈಸೂರು: ಕೃಷಿ ಕ್ಷೇತ್ರ ನಂಬಿದ ರೈತರು ಸಂಕಷ್ಟದಲ್ಲಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಸೊಪ್ಪು ಮೇಳದಂತ ಕಾರ್ಯಕ್ರಮಗಳು ರೈತರಲ್ಲಿ ಭರವಸೆ ಮೂಡಿಸಲು ಸಹಕಾರಿ ಎಂದು ಮೈಸೂರಿನ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅಭಿಪ್ರಾಯಪಟ್ಟರು.
ಸಹಜ ಸಮೃದ್ಧ ಆಶ್ರಯದಲ್ಲಿ ನಂಜರಾಜ ಬಹದ್ದೂರು ಛತ್ರದಲ್ಲಿ ಶನಿವಾರದಿಂದ ಆರಂಭಗೊಂಡ ಎರಡು ದಿನಗಳ ಸೊಪ್ಪು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೊಪ್ಪು ಹಳ್ಳಿಗಳಲ್ಲಿ ಅಗ್ಗವಾಗಿ ಮತ್ತು ಸುಲಭನಾಗಿ ಸಿಗುತ್ತದೆ. ಎಲ್ಲ ವರ್ಗದ ಜನರ ಹೊಟ್ಟೆ ತುಂಬಿಸುತ್ತದೆ. ಸೊಪ್ಪಿನ ಕೃಷಿ ಮತ್ತು ಆಹಾರ ಸಂಸ್ಕೃತಿಯನ್ನು ಜನಪ್ರಿಯಗೊಳಿಸುವ ಅಗತ್ಯವಿದೆ. ಆದರೆ ಸೊಪ್ಪು ನಗರಗಳಲ್ಲಿ ದುಬಾರಿಯಾಗಿದ್ದು, ಕೈಗೆಟಕುವಂತೆ ಮಾಡಬೇಕು ಎಂದರು.
ಸುತ್ತೂರಿನ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್.ಜ್ಞಾನೇಶ್ ಮಾತನಾಡಿ, ಸೊಪ್ಪು ಪರಿಪೂರ್ಣ ಆಹಾರ. ದೇಹಕ್ಕೆ ಬೇಕಾದ ಪೋಷಣೆ ಹಾಗೂ ಚೈತನ್ಯವನ್ನು ಕೊಡುವಂಥದ್ದು. ರಕ್ತಹೀನತೆ, ಅಪೌಷ್ಟಿಕತೆ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸೊಪ್ಪಿನ ಪಾತ್ರ ಹಿರಿದು. ಮೌಲ್ಯವರ್ಧನೆ ಮೂಲಕ ಸೊಪ್ಪು ಬೆಳೆಗಾರರು ಆದಾಯ ದುಪ್ಪಟ್ಟು ಮಾಡಿಕೊಳ್ಳಬಹುದು ಎಂದರು.
ಮಾರುಕಟ್ಟೆಯಲ್ಲಿ ಸಿಗುವ ಸೊಪ್ಪಿನ ಜತೆಗೆ ಔಷಧೀಯ ಗುಣಗಳ ಸ್ಥಳೀಯ ಸೊಪ್ಪುಗಳು ಮತ್ತು ನೈಸರ್ಗಿಕವಾಗಿ ಸಿಗುವ ಬೆರಕೆ ಸೊಪ್ಪನ್ನು ಆಹಾರವಾಗಿ ಬಳಸುವುದನ್ನು ರೂಢಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಬಿ.ಡಿ.ಜಯರಾಮ್ ಮಾತನಾಡಿ, ಸೊಪ್ಪಿನ ಕೃಷಿ ಲಾಭದಾಯಕವಾದದು. ಕಡಿಮೆ ಸಮಯದಲ್ಲಿ ಸೊಪ್ಪು ಬೆಳೆಸಿ ಮಾರುಕಟ್ಟೆಗೆ ತರಬಹುದು. ಕಡಿಮೆ ಜಾಗ ಮತ್ತು ನೀರಿನ ಕೊರತೆ ಇರುವ ಸಣ್ಣ ರೈತರು ಕೂಡ ಸೊಪ್ಪಿನ ಕೃಷಿ ಮಾಡಿ ನಿರಂತರ ಲಾಭ ಮಾಡಿಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಗ್ಗಡದೇವನಕೋಟೆ ತಾಲೂಕಿನ ಮಚ್ಚೂರು ಹಾಡಿಯ ಪಾರ್ವತಿ ಮಾತನಾಡಿ, ಹೊಲದಲ್ಲಿ ಬೆಳೆಯುವ ಕಳೆಗಳು, ಕಾಡಿನ ಗಿಡದ ಕುಡಿಗಳು ಊಟಕ್ಕೂ ಚೆಂದ. ಆರೋಗ್ಯಕ್ಕೂ ಒಳ್ಳೆಯದು. ಬೆರಕೆ ಸೊಪ್ಪಿನ ಮುಂದೆ ಯಾವ ಸೊಪ್ಪೂ ಸಾಟಿ ಅಲ್ಲ. ಅಂಥ ಸೊಪ್ಪು ತಿಂದು ಚೆನ್ನಾಗಿರಬೇಕು ಎಂದರು.
ಸಹಜ ಸಮೃದ್ಧ-ಸಾವಯವ ಕೃಷಿಕರ ಬಳಗದ ನಿರ್ದೇಶಕ ಜಿ.ಕೃಷ್ಣ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಕಳೆದುಕೊಳ್ಳುತ್ತಿರುವ ಆಹಾರ ಮೂಲಗಳಲ್ಲಿ ಸೊಪ್ಪು ಸಹ ಒಂದು. ಕಳೆಸೊಪ್ಪುಗಳು, ಕುಡಿಗಳು, ಕೈತೋಟದ ಸೊಪ್ಪುಗಳು ಇವುಗಳ ಪಟ್ಟಿ ದೊಡ್ಡದಿದೆ. ಹೊನಗೊನೆ, ಒಂದಲೆಗ, ಕಾಕಿ, ಗುಬ್ಬಿಸೊಪ್ಪು, ಬಸಳೆ, ನೆಲಬಸಳೆ, ಹರಿವೆ, ಕಿರ್ಕಸಾಲಿ, ಮೂಲಂಗಿ, ಕೆಸು, ಹಾಡೆಬಳ್ಳಿ, ಒಂದೇ..? ಎರಡೇ..?. ತರೇಹವಾರಿ ಸೊಪ್ಪುಗಳು, ತರಕಾರಿಗಳು ಇತರೆ ಕಳೆದುಹೋಗುತ್ತಿರುವ ಆಹಾರದ ಮೂಲಗಳನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ದೇಸಿ ಸೊಪ್ಪಿನ ಮೇಳ ಆಯೋಜಿಸಲಾಗಿದೆ ಎಂದರು.
ಸಾವಯವ ಸೊಪ್ಪಿನ ಕೃಷಿಯಲ್ಲಿ ಸಾಧನೆ ಮಾಡಿರುವ ಪಿರಿಯಾಪಟ್ಟಣದ ಹಿಟ್ನೆಹೆಬ್ಬಾಗಲಿನ ಶಂಕರ್ ಮತ್ತು ಧಾರವಾಡದ ಸೊಪ್ಪಿನ ರೈತ ಮಾರುಕಟ್ಟೆಯನ್ನು ಹುಟ್ಟು ಹಾಕಿ ಮುನ್ನಡೆಸುತ್ತಿರುವ ಗದಿಗೆಪ್ಪ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸೊಪ್ಪುಗಳ ಮಹತ್ವವನ್ನು ವಿವರಿಸುವ ಸಕತ್ ಸೊಪ್ಪು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಸಹಜ ಸಮೃದ್ಧದ ಶಾಂತಕುಮಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net