

ಭರಮಸಾಗರ: ನೃತ್ಯ, ಸಂಗೀತ ಸೇರಿ ವಿವಿಧ ರೀತಿಯ ಕಲೆಗಳು ನಮ್ಮ ನೆಮ್ಮದಿಗೆ ಸಹಕಾರಿ ಆಗಲಿದ್ದು, ಅವುಗಳನ್ನು ಉಳಿಸಿ-ಬೆಳೆಸುವ ಕಾರ್ಯ ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದು ಸಂಗೀತ ಶಿಕ್ಷಕಿ ಶಾಂತಾ ಅಶೋಕ್ ಹೇಳಿದರು.
ಬಿಳಿಚೋಡು ರಸ್ತೆಯಲ್ಲಿ ಈಚೆಗೆ ನೃತ್ಯ ಮತ್ತು ಸಂಗೀತ ತರಬೇತಿ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಬಹುತೇಕರಲ್ಲಿ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಅವರ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾದ ರೀತಿ ಶಾಲಾ ರಜೆ ದಿನಗಳಲ್ಲಿ ತರಬೇತಿ ನೀಡಲಾಗುವುದು ಎಂದರು.
ಡಿವಿಎಸ್ ಶಾಲೆ ಮುಖ್ಯಶಿಕ್ಷಕ ಕೆ.ಜಿ.ಗುರುಸಿದ್ದೇಶ್ ಮಾತನಾಡಿ, ಗ್ರಾಮೀಣ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಒಂದು ಉತ್ತಮ ವೇದಿಕೆ ಆಗಲಿದೆ ಎಂದು ಹೇಳಿದರು.
ನೃತ್ಯ ಶಿಕ್ಷಕಿ ಭಾರ್ಗವಿ ವಿಘ್ನೇಶ್ ಮಾತನಾಡಿ, ಮಕ್ಕಳಲ್ಲಿಯ ಆಸಕ್ತಿಯನ್ನು ಗುರುತಿಸಿ ಅವರಲ್ಲಿನ ಕಲಿಕೆಯನ್ನು ಪಾಲಕರು ಪ್ರೋತ್ಸಾಹಿಸಬೇಕು ಎಂದರು.
ಇಪ್ರೋ ಕಂಪನಿ ನಿರ್ದೇಶಕ ಕೋಗುಂಡೆ ಮಂಜುನಾಥ್ ಮಾತನಾಡಿದರು. ಜನರೇಷನ್ ಅರೇನಾ ಫಿಟ್ನೆಸ್ ಕ್ಲಬ್ ಸಂಸ್ಥಾಪಕ ಜಿ.ಅಶೋಕ್, ಜಿ.ಎ.ಚಂದನ್, ಗೀತಾ, ವೀಣಾ ಪ್ರದೀಪ್, ಈಶ್ವರೀಯ ವಿವಿಯ ರೇಖಾ, ಗೀತಾ ರುದ್ರಮುನಿ, ಸಂಗೀತ ಶಿಕ್ಷಕ ಎಸ್.ವಿ.ಗುರುಮೂರ್ತಿ ಇದ್ದರು.