ಕಿರು ಸೇತುವೆಗಳ ವಿಶೇಷ ಯೋಜನೆಗೆ ಚಿಂತನೆ ; ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ

IMG-20230725-WA0041.jpg
Published on

ಬೆಳಗಾವಿ : ಮಳೆಗಾಲದಲ್ಲಿ ಖಾನಾಪುರ ಸೇರಿದಂತೆ ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ನದಿ ದಾಟಲು ಅನುಕೂಲವಾಗುವಂತೆ ಕಿರುಸೇತುವೆಗಳನ್ನು ನಿರ್ಮಿಸುವ ವಿಶೇಷ ಯೋಜನೆ ಜಾರಿಗೆ ತರುವ ಚಿಂತನೆ ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ  ಜಾರಕಿಹೊಳಿ ಹೇಳಿದರು.

ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಖಾನಾಪುರ ತಾಲೂಕಿನ ಭೂರಣಕಿ ಗ್ರಾಮಕ್ಕೆ ಭೇಟಿ ನೀಡಿ ಮನೆಹಾನಿ ಪರಿಶೀಲಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿ ದಾಟಲು ಅನುಕೂಲವಾಗುವಂತೆ ಐದರಿಂದ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಕಿರುಸೇತುವೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಖಾನಾಪುರ ತಾಲೂಕಿನಲ್ಲಿ ಸೇತುವೆ ನಿರ್ಮಾಣಕ್ಕೆ ವಿಶೇಷ ಅಭಿಯಾನ ಮಾದರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. 

ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ರಸ್ತೆಗಳು ತೀವ್ರ ಹದಗೆಟ್ಟಿರುವುದು ಗಮನಕ್ಕೆ ಬಂದಿರುತ್ತದೆ. ಸದ್ಯಕ್ಜೆ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ನವೆಂಬರ್ ಬಳಿಕ ರಸ್ತೆ ನಿರ್ಮಾಣದ ಕುರಿತು ಪರಿಶೀಲಿಸಲಾಗುವುದು. ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳಿಗೆ ಸದ್ಯಕ್ಕೆ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುತ್ತಿದೆ. ಸಂಪೂರ್ಣವಾಗಿ ಕುಸಿದಿರುವ ಮನೆಗಳ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net