ಶೀಗಿ ಹುಣ್ಣಿಮೆ ಸಂಭ್ರಮ ಕಸಿದ ವರುಣ

SGN SHIGE HUNNIME
Published on

ಶಿಗ್ಗಾಂವಿ: ವಾರದಿಂದ ಸುರಿಯುತ್ತಿರುವ ಮಳೆ ಗುರುವಾರವೂ ಮುಂದುವರಿದ ಪರಿಣಾಮ ತಾಲೂಕಿನಾದ್ಯಂತ ಸಂಭ್ರಮದಿಂದ ನಡೆಯಬೇಕಿದ್ದ ಶೀಗಿ ಹುಣ್ಣಿಮೆ ಸಡಗರ, ಉತ್ಸಾಹ, ಹುರುಪಿಲ್ಲದೆ ಕೇವಲ ಪೂಜೆಗಷ್ಟೇ ಸೀಮಿತವಾಗಿ ನಡೆಯಿತು.

ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದವರೆಗೂ ಬಿಟ್ಟು ಬಿಡದೇ ಮಳೆ ಸುರಿಯಿತು. ಹೀಗಾಗಿ, ರೈತರು ತಮ್ಮ ಜಮೀನುಗಳಿಗೆ ತೆರಳಿ ಚರಗ ಚೆಲ್ಲುವುದಕ್ಕೂ ಹೋಗದಂತಾಯಿತು. ಭಾರಿ ಮಳೆಯಿಂದ ಹಳ್ಳ, ಕೊಳ್ಳ ತುಂಬಿ ಹರಿಯುತ್ತಿದ್ದು, ರೈತರು ತಮ್ಮ ಜಮೀನಿಗೆ ಹೋಗಲಾರದೆ ಪರದಾಡಿದರು. ಹೊಲದ ಬದುವಿನಲ್ಲಿ ಪಾಂಡವರನ್ನು ಇಟ್ಟು ಪೂಜೆ ಸಲ್ಲಿಸಿ, ಚರಗ ಚೆಲ್ಲಿದರು. ವರುಣದ ಅವಕೃಪೆಯಿಂದ ಶೀಗಿ ಹುಣ್ಣಿಮೆ ಸಂಭ್ರಮ ಕೇವಲ ಪೂಜೆಗೆ ಸೀಮಿತವಾಯಿತು.

ಪ್ರತಿವರ್ಷವೂ ಶೀಗಿ ಹುಣ್ಣಿಮೆಗೆ ಬಂಧು-ಬಳಗದೊಂದಿಗೆ ಹೊಲದಲ್ಲಿ ಭೂತಾಯಿಯನ್ನು ಪೂಜಿಸಿ ನಂತರ ಭೋಜನ ಸವಿದು ಖುಷಿ ಪಡುತ್ತಿದ್ದೇವು. ಆದರೆ, ಈ ವರ್ಷ ನಿರಂತರ ಮಳೆಯಿಂದಾಗಿ ಮನೆಯಲ್ಲಿಯೇ ಕುಳಿತು ಊಟ ಮಾಡುವಂತಾಯಿತು. | ಈರನಗೌಡ ಪಾಟೀಲ ಅಡವಿ ಸೋಮಾಪುರ ಗ್ರಾಮದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net