

ಧನಂಜಯ ಗುರುಪುರ
ಬಜ್ಪೆ- ಕೈಕಂಬ- ಪೊಳಲಿ- ಬಿ.ಸಿ.ರೋಡ್ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಅಡ್ಡೂರು-ಪೊಳಲಿ ಮಧ್ಯೆ ಇರುವ ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಮುಂದಿನ 10-15 ದಿನಗಳೊಳಗೆ ಆರಂಭಗೊಳ್ಳುವ ಸಾಧ್ಯತೆ ಇದೆ.
ಸೇತುವೆಯಲ್ಲಿ 2024ರ ಆಗಸ್ಟ್ 18ರಿಂದ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಒಂದೂವರೆ ತಿಂಗಳ ಬಳಿಕ ಬೆಂಗಳೂರಿನಿಂದ ಆಗಮಿಸಿದ್ದ ಸರ್ಕಾರದ ಉನ್ನತ ಮಟ್ಟದ ಸೇತುವೆ ತಜ್ಞರ ಸಮಿತಿಯು ಪೊಳಲಿ- ಅಡ್ಡೂರು ಸೇತುವೆ ಪರಿಶೀಲಿಸಿತ್ತು. ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಹೊಸ ಸೇತುವೆ ಅನಿವಾರ್ಯ. ಹಳೇ ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸಲು ಅವಕಾಶವಿದೆ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿತ್ತು. ಆದರೆ, ತಿಂಗಳು ಐದಾದರೂ ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಆರಂಭಿಸುವ ವಿಷಯದಲ್ಲಿ ಸರ್ಕಾರ ಅಧಿಕೃತ ಹೇಳಿಕೆ ಹೊರಡಿಸಿಲ್ಲ. ಈ ಮಧ್ಯೆ ಸೇತುವೆಯಲ್ಲಿ ಶಾಲಾ -ಕಾಲೇಜುಗಳ ಬಸ್‌ಗಳ ಸಹಿತ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ಎಚ್ಚರಿಕೆ ನೀಡಿದ್ದರು.
ಸೇತುವೆಯಲ್ಲಿ ಭಾರಿ ವಾಹನ ನಿಷೇಧಿಸಲಾಗಿದೆಯಾದರೂ ಜಲ್ಲಿ, ಕಲ್ಲು, ಮರಳು ಹೊತ್ತ ಲಾರಿಯಂತಹ ಭಾರಿ ವಾಹನಗಳು ಓಡಾಡಲು ಅವಕಾಶವಿದೆ. ಸಾ*ನ್ಯ ಬಸ್‌ಗಳ ಸಂಚಾರಕ್ಕೆ ಮಾತ್ರ ಅವಕಾಶವಿಲ್ಲ. ಸೇತುವೆಯ ಎರಡೂ ಪಾರ್ಶ್ವದಲ್ಲಿ ಕಮಾನು ಅಳವಡಿಸಲಾಗಿದ್ದು, ಒಂದು ಬದಿಯ ಕಮಾನು ಮುರಿಯಲಾಗಿದೆ. ನಾಮಕಾವಸ್ಥೆಗೆ ಪೊಲೀಸ್ ಚೆಕ್‌ಪೋಸ್ಟ್ ಇದೆ. ಹೆಚ್ಚಿನ ಅವಧಿಯಲ್ಲಿ ಪೊಲೀಸರು ಇರುವುದಿಲ್ಲ. ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರ ಕಂಡುಬರುತ್ತಿದೆ.
ಈ ವರ್ಷ ಪೊಳಲಿ ಜಾತ್ರೆ ಹೊತ್ತಿಗೆ ಸೇತುವೆ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ. ಆಗಲೂ ಪ್ರಸಕ್ತ ವ್ಯವಸ್ಥೆ ಮುಂದುವರಿದಲ್ಲಿ ಪೊಳಲಿ ಜಾತ್ರೆ ಭಕ್ತರು ಮಿನಿ ಬಸ್‌ಗಳಲ್ಲಿ ಅಥವಾ ಲಘು ವಾಹನಗಳಲ್ಲಿ ಇಲ್ಲವೇ ನಡೆದುಕೊಂಡು ದೇವಸ್ಥಾನ ಪ್ರವೇಶಿಸಬೇಕಾಗುತ್ತದೆ. ಜಾತ್ರೆ ಹೊತ್ತಿಗೆ ಸಾಮಾನ್ಯ ಕಾಮಗಾರಿ ಮುಗಿಸುವಂತೆ ಮಾಜಿ ಸಚಿವ ರಮಾನಾಥ ರೈ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ಎಂದು ಅಧಿಕೃತ ಮೂಲವೊಂದು ತಿಳಿಸಿದೆ.
ನಿಂತಿಲ್ಲ ಮರಳುಗಾರಿಕೆ
50 ವರ್ಷಗಳಷ್ಟು ಹಳೆಯದಾದ ಪೊಳಲಿ ಸೇತುವೆ ಶಿಥಿಲಗೊಳ್ಳಲು ಹತ್ತಿರದಲ್ಲೇ ನಡೆಯುತ್ತಿರುವ ಮರಳುಗಾರಿಕೆಯೂ ಕಾರಣ ಎಂಬ ದೂರುಗಳು ಕೇಳಿಬಂದಿವೆ. ಸೇತುವೆ ಬಳಿಯಲ್ಲಿ ಮರಳುಗಾರಿಕೆ ನಿಷೇಧಿಸಲಾಗಿದೆ ಎಂದು ಸೇತುವೆ ತಜ್ಞರ ಸಮಿತಿ ವರದಿ ವಾಡಿದ್ದರೂ ಮರಳುಗಾರಿಕೆ ನಿಂತಿಲ್ಲ. ತಕ್ಷಣ ಸೇತುವೆ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಆರಂಭವಾದಲ್ಲಿ ಮರಳುಗಾರಿಕೆ ಕಷ್ಟವಾಗಬಹುದು ಎಂಬ ನೆಲೆಯಲ್ಲಿ ಕಾಮಗಾರಿ ವಿಳಂಬಕ್ಕೆ ಪ್ರಯತ್ನಗಳೂ ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಿಡಬ್ಲ್ಯುಡಿ ಹಿರಿಯ ಅಧಿಕಾರಿಯಿಂದ ಭರವಸೆ
ಜ.11ರಂದು ಇಲ್ಲಿಗೆ ಆಗಮಿಸಿರುವ ಪಿಡಬ್ಲ್ಯುಡಿ ಹಿರಿಯ ಪ್ರಧಾನ ಇಂಜಿನಿಯರ್ ಜಗದೀಶ್, ಶಿಥಿಲಗೊಂಡಿರುವ ಸೇತುವೆ ಪರಿಶೀಲನೆ ನಡೆಸಿ, ಮುಂದಿನ 15 ದಿನಗಳೊಳಗೆ ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸಲು 6.50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ. ಕೆಲವೇ ದಿನದೊಳಗೆ ಟೆಂಡರ್ ಕರೆಯಲಾಗುತ್ತದೆ. ಮೊದಲಿಗೆ ಸೇತುವೆ ಮಧ್ಯೆ 3 ಪಿಲ್ಲರ್‌ಗಳ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ನಡೆಸಲಾಗುವುದು. ಮಳೆಗಾಲದ ಹೊತ್ತಿಗೆ ಸೇತುವೆಯಲ್ಲಿ ಎಲ್ಲ ವಾಹನಗಳ(9.20 ಟನ್‌ವರೆಗಿನ) ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಪಿಡಬ್ಲ್ಯುಡಿ ಅಧಿಕಾರಿ ತಿಳಿಸಿದ್ದಾರೆ.
ಸೇತುವೆ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಸಂದರ್ಭ ನದಿ ನೀರಿಗೆ ಬಂಡು ಹಾಕಬೇಕಾಗುತ್ತದೆ. ಕಾಮಗಾರಿ ಮುಗಿಯುವ ತನಕ ಈ ಮಣ್ಣಿನ ಬಂಡು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ವಾಡಿಕೊಂಡುವಂತೆ ಇಲಾಖೆಗೆ ಮನವಿ ವಾಡಿಕೊಂಡಿದ್ದೇವೆ. ಮಳೆಗಾಲಕ್ಕೆ ಮುಂಚಿತವಾಗಿ ಸೇತುವೆಯ ಪಿಲ್ಲರ್‌ಗಳ ಕೆಳಗೆ ಕಾಮಗಾರಿ ಮುಗಿಸಬೇಕು. ಮಳೆಗಾಲ ಆರಂಭವಾದರೆ ನೀರಿನ ರಭಸಕ್ಕೆ ಕೆಲಸ ಕಷ್ಟ. ಮಳೆಗಾಲದಲ್ಲಿ ಮೇಲ್ಭಾಗದಲ್ಲಿ ಕಾಮಗಾರಿ ನಡೆಸಬಹುದು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಯು.ಪಿ.ಇಬ್ರಾಹಿಂ, ಜಿ.ಪಂ.ಮಾಜಿ ಸದಸ್ಯ ಪೊಳಲಿ ಸೇತುವೆಯ ಧಾರಣಾ ಸಾಮರ್ಥ್ಯ ವೃದ್ಧಿಸುವ ಕಾಮಗಾರಿ ಶೀಘ್ರ ಆರಂಭಿಸುವಂತೆ ಸರ್ಕಾರಕ್ಕೆ ಒತ್ತಡ ಹೇರುವಂತೆ ಮಾಜಿ ಸಚಿವ ರಮಾನಾಥ ರೈ ಅವರಲ್ಲಿ ಮನವಿ ಮಾಡಿದ್ದೇವೆ. ರೈ ಅವರು ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರ ಕಾಮಗಾರಿ ಆರಂಭಿಸಲು ಪಿಡಬ್ಲ್ಯುಡಿ ಇಲಾಖೆಗೆ ಸೂಚಿಸಿದ್ದಾರೆ. ಮುಂದಿನ 15 ದಿನಗಳೊಳಗೆ ಕಾಮಗಾರಿ ಆರಂಭದ ಭರವಸೆ ಸಿಕ್ಕಿದೆ. ಇಲ್ಲವಾದಲ್ಲಿ ನಾವು ಕೈಗೊಳ್ಳುವ ಪ್ರತಿಭಟನೆಯಲ್ಲಿ ರೈ ಅವರೂ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆ. ಚಂದ್ರಹಾಸ ಪಲ್ಲಿಪಾಡಿ, ಕರಿಯಂಗಳ ಗ್ರಾ.ಪಂ. ಸದಸ್ಯ https://www.vijayavani.net/sankranti-puja-at-sri-ramanjaney-hill https://www.vijayavani.net/the-objective-is-economic-empowerment-of-the-people