

ನಾಗಮಂಗಲ : ಮೈತ್ರಿಯ ನೆಪದಿಂದ ಮೈಸೂರು ಭಾಗದಲ್ಲಿ ಬಿಜೆಪಿ ನೆಲಕಚ್ಚಿದೆ. ಆದ್ದರಿಂದ ನಾನು ಮತ್ತು ನನ್ನ ಮಗ ಚೇತನ್ ನಮ್ಮ ಮಾತೃ ಪಕ್ಷವಾದ ಕಾಂಗ್ರೆಸ್ ಸೇರಲಿದ್ದೇವೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮಾಹಿತಿ ನೀಡಿದರು.
ಪಕ್ಷ ಬಲಿಷ್ಟಪಡಿಸುವ ಉದ್ದೇಶದಿಂದ ನಾವು ಸೇರ್ಪಡೆಯಾಗಿದ್ದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಈಗಾಗಲೇ ರಾಜೀನಾಮೆ ನಿಡಿದ್ದೇವೆ. ಈಗಾಗಲೆ ಸಚಿವರಾದ ಚಲುವರಾಯಸ್ವಾಮಿ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಪಕ್ಷ ಸೇರುವ ದಿನಾಂಕ ಮಾತ್ರ ನಿಗದಿಯಾಗಬೇಕಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ರಾಜಕೀಯವಾಗಿ ಯಾರ ಏಳಿಗೆಯನ್ನೂ ಸಹಿಸದೆ ಇರುವುದು ಮತ್ತು ಆತ್ಮ ಗೌರವ ಅಥವಾ ಆತ್ಮಸಾಕ್ಷಿಯಿಲ್ಲದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬ ಇಂಗ್ಲಿಷ್‌ನವರಿದ್ದಂತೆ. ಈ ಹಿಂದೆ ವಕೀಲ ಗಂಗಾಧರಮೂರ್ತಿಯ ಕೊಲೆ ಕೇಸ್ ನನ್ನ ಮೇಲೆ ಹಾಕಿಸುವ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸಿದ್ದರು ಎಂದು ಕಿಡಿಕಾರಿದರು.
ಲೋಕಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕೊಡುವ ನೆಪದಲ್ಲಿ ಮುಂದಿನ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ನನ್ನನ್ನು ಬಳಸಿಕೊಂಡರು. ಈಗಾಗಲೇ ಹಾಸನ ಮತ್ತು ರಾಮನಗರದ ಜನ ಇವರನ್ನು ಓಡಿಸಿದ್ದಾರೆ. ಅಲ್ಲಿಯ ಜನ ಪಾಠ ಕಲಿತ್ತಿದ್ದಾರೆ ಎಂದರು.
ಚನ್ನಪಟ್ಟಣದ ಜನ ದಡ್ಡರಲ್ಲ. ಪೂರ್ವನಿಯೋಜಿತವಾಗಿ ತಮ್ಮ ಮಗನನ್ನು ಅಭ್ಯರ್ಥಿಯಾಗಿ ತೀರ್ಮಾನಿಸಿದ್ದ ಕುಮಾರಸ್ವಾಮಿ, ಯೋಗೇಶ್ವರ್‌ಗೆ ಅಥವಾ ಪಕ್ಷದ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡುವ ನಾಟಕವಾಡಿದ್ದಾರೆ. ಇಂತಹ ನಾಟಕ ಹೆಚ್ಚು ದಿನ ನಡೆಯೊಲ್ಲ.
ಚನ್ನಪಟ್ಟಣದ ಜನ ಈಗಾಗಲೇ ತೀರ್ಮಾನಿಸಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ನಿಶ್ಚಿತ ಎಂದರು.
ವಕೀಲ ಟಿ.ಕೆ.ರಾಮೇಗೌಡ, ತಾ.ಪಂ.ಮಾಜಿ ಸದಸ್ಯ ಹೇಮರಾಜ್, ಮುಖಂಡರಾದ ತೊಳಲಿ ಕೃಷ್ಣಮೂರ್ತಿ, ಸಿದ್ದಲಿಂಗಸ್ವಾಮಿ ಹಾಗೂ ಚೀಣ್ಯ ಕರೀಗೌಡ ಇದ್ದರು.