ಕಾಫಿ ಬೆಳೆ ಹಾನಿಗೆ ಶೀಘ್ರದಲ್ಲೇ ಪರಿಹಾರ: ಎಡಿಸಿ ಡಾ.ಕುಮಾರ್

Dr Kumar
????????????????????????????????????
Published on

ಚಿಕ್ಕಮಗಳೂರು: ಜನವರಿಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಆಗಿರುವ ಕಾಫಿ ಬೆಳೆ ಹಾನಿ ಸಮೀಕ್ಷೆ ನಡೆಸಲಾಗಿದ್ದು, ಇಷ್ಟರಲ್ಲೇ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ತಿಳಿಸಿದರು.

ಮಂಗಳವಾರ `ವಿಜಯವಾಣಿ' ಜತೆ ಮಾತನಾಡಿದ ಅವರು, ಈ ಸಂಬಂಧ ದತ್ತಾಂಶದಲ್ಲಿ ದಾಖಲು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 1,190 ಎಕರೆ ಪ್ರದೇಶದಲ್ಲಿ ಕಾಫಿ ಫಸಲು ನಾಶವಾಗಿದೆ ಎಂದು ಬೆಳೆಗಾರ ಸಂಘಟನೆಗಳು ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ. ಇದರಲ್ಲಿ ಶೇ.50ರಷ್ಟು ಪ್ರಕರಣಗಳು ಕಳೆದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್‍ನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಲ್ಲಿ ಪರಿಹಾರ ಪಡೆದವರೇ ಆಗಿರುವುದರಿಂದ ವರ್ಷದೊಳಗೇ ಮತ್ತೆ ಅವರಿಗೆ ಪರಿಹಾರ ನೀಡಲು ಸಾಧ್ಯವಾಗದು ಎಂದರು.

ಕಳೆದ ವರ್ಷದ ಅತಿವೃಷ್ಟಿ ಹಾನಿಗೆ ಸಂಬಂಧಿಸಿ 27 ಕೋಟಿ ರೂ. ಬಿಡುಗಡೆಯಾಗಿದ್ದು, ನಷ್ಟ ಹೊಂದಿದ ಕೃಷಿಕರಿಗೆ ಪರಿಹಾರ ವಿತರಿಸಲಾಗಿದೆ. ಜನವರಿಯಲ್ಲಾದ ಅತಿವೃಷ್ಟಿ ವೇಳೆ 150 ಎಕರೆ ಪ್ರದೇಶದ ಭತ್ತದ ಬೆಳೆ ಹಾನಿಯಾಗಿದ್ದು ಅವರಿಗೂ ಪರಿಹಾರ ನೀಡಲಾಗುವುದು. ಉಳಿದಂತೆ ಕಳೆದ ವರ್ಷ ಸಂಭವಿಸಿದ ಹಾನಿಯಲ್ಲಿ ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಮೆಸ್ಕಾಂಗೆ ಸಂಬಂಧಿಸಿದ ಕಾಮಗಾರಿಗಳನ್ನು ಇಷ್ಟರಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ವಾರದಲ್ಲಿ ಗಣಿಗಾರಿಕೆ ವರದಿ:
ಶಿವಮೊಗ್ಗದ ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಲೋಕಾಯುಕ್ತವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಎಲ್ಲ ಜಿಲ್ಲೆಗಳಲ್ಲೂ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲಿದೆ. ಅಂತೆಯೇ ಈ ಜಿಲ್ಲೆಯಲ್ಲೂ ತನಿಖೆ ನಡೆಸಲಾಗುತ್ತಿದೆ. ಗಣಿಗಾರಿಕೆ ಪ್ರದೇಶಗಳನ್ನು ಗುರುತಿಸಿ ಅಧಿಕೃತವೋ, ಅನಧಿಕೃತವೋ? ಎಂಬುದನ್ನು ಪರಿಶೀಲಿಸಿ ವಾರದೊಳಗೆ ಲೋಕಾಯುಕ್ತಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ್ರವಾಸಿ ವಾಹನ ನಿಯಂತ್ರಣಕ್ಕೆ ಕ್ರಮ:
ಗಿರಿಶ್ರೇಣಿಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ವಾಹನ ದಟ್ಟಣೆ ಹೆಚ್ಚುತ್ತಿರುವ ದೂರುಗಳ ಬಗ್ಗೆ ಪ್ರವಾಸೋದ್ಯಮ ಸಮಾಲೋಚನಾ ಸಭೆಯಲ್ಲಿ ಪ್ರಸ್ತಾಪವಾಗಿದೆ. ಸಭೆಯಲ್ಲಿ ಕೇಳಿಬಂದ ಉಪಯುಕ್ತ ಸಲಹೆಗಳನ್ನು ಆಧರಿಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು. ಕೈಮರ ಸಮೀಪ ಪ್ರವಾಸಿ ವಾಹನಗಳ ನಿಲುಗಡೆಗೆ ಜಾಗ ಗುರುತಿಸಿ ಅಲ್ಲಿಂದ ಗಿರಿ ಪ್ರದೇಶಕ್ಕೆ ಸರ್ಕಾರಿ ವಾಹನಗಳ ವ್ಯವಸ್ಥೆ ಮಾಡುವ ಬಗ್ಗೆ ನೀಡಿದ ಸಲಹೆಯನ್ನು ಪ್ರಸ್ತಾಪಿಸಿ ಪಾರ್ಕಿಂಗ್‍ಗೆ ವ್ಯವಸ್ಥೆ ಕಲ್ಪಿಸಲು ಆ ಪ್ರದೇಶದಲ್ಲಿ ಸರ್ಕಾರಿ ಜಾಗವಿಲ್ಲ, ಖಾಸಗಿ ಜಾಗ ಖರೀದಿಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಕಾಲಾವಕಾಶ ಹಿಡಿಯಲಿದ್ದು ಪರಿಶೀಲಿಸಲಾಗುವುದು. ಅಷ್ಟಕ್ಕೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗದು. ಸ್ವತಃ ತಿಳಿದುಕೊಂಡು ಸಹಕರಿಸಿದರೆ ಉತ್ತಮ ಎಂದು ಹೇಳಿದರು.

ಲಸಿಕೆಯಿಂದ ಸಮಸ್ಯೆ ಇಲ್ಲ:
ಜಿಲ್ಲೆಯಲ್ಲಿ ಕರೊನಾ ವಿರುದ್ಧದ ಲಸಿಕೆ ಅಭಿಯಾನ ಯಶಸ್ವಿಯಾಗುತ್ತಿದ್ದು ಕಂದಾಯ, ಪೊಲೀಸ್ ಮತ್ತಿತರ ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಈ ಸುತ್ತಿನ ಆರಂಭದಲ್ಲೇ ತಾವು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಲಸಿಕೆ ಹಾಕಿಸಿಕೊಂಡಿರುವುದಾಗಿ ತಿಳಿಸಿದರು. ಲಸಿಕೆಯಿಂದ ಯಾವುದೇ ಸಮಸ್ಯೆಯಾಗದು. ಎಲ್ಲ ರೀತಿಯಲ್ಲೂ ಸುರಕ್ಷಿತವಾಗಿದೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net