

ಗಂಗಾವತಿ: ಬಸಾಪಟ್ಟಣದಲ್ಲಿ ರೈಲು ನಿಲ್ದಾಣ ನಿರ್ಮಿಸುವ ಬೇಡಿಕೆಗೆ ಕೇಂದ್ರ ಸಚಿವ ವಿ. ಸೋಮಣ್ಣ ಸಕಾರಾತ್ಮಕ ಸ್ಪಂದಿಸಿದ್ದಾರೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ. ಇದು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ರೈಲ್ವೆ ರಾಜ್ಯ ಸಚಿವರ ಸೂಚನೆ ಮೇರೆಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದ ಗ್ರಾಮಸ್ಥರ ನಿಯೋಗ ಸೋಮವಾರ ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿರುವ ಸಚಿವರ ನಿವಾಸಕ್ಕೆ ತೆರಳಿ ಮನವರಿಕೆ ಮಾಡಿತ್ತು. ಬಸಾಪಟ್ಟಣ ವ್ಯಾಪ್ತಿ, ಜನಸಂಖ್ಯೆ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಿ, ರೈಲು ನಿಲ್ದಾಣದ ಅಗತ್ಯತೆಯ ಬಗ್ಗೆ ಸಚಿವರಿಗೆ ನಿಯೋಗ ಮನವರಿಕೆ ಮಾಡಿತ್ತು. ಮನವಿಗೆ ಸ್ಪಂದಿಸಿದ ಸೋಮಣ್ಣ ಅವರು, ಹುಬ್ಬಳ್ಳಿ ವಿಭಾಗದ ರೈಲ್ವೆ ಅಧಿಕಾರಿಗಳೊಂದಿಗೆ ಸಂಪರ್ಕಿಸಿ, ರೈಲ್ವೆ ನಿಲ್ದಾಣ ಯೋಜನೆ ಹಾಗೂ ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸುವ ಬಗ್ಗೆ ಸೂಚನೆ ನೀಡಿದರು. ಅಧಿಕಾರಿಗಳ ತಂಡ ಶೀಘ್ರದಲ್ಲಿಯೇ ಸ್ಥಳಕ್ಕೆ ಭೇಟಿ ನೀಡುವ ವಿಶ್ವಾಸವಿದೆ ಎಂದು ಎಂದು ಪರಣ್ಣ ಮುನವಳ್ಳಿ ತಿಳಿಸಿದರು. ನಿಯೋಗದಲ್ಲಿ ಪ್ರಮುಖರಾದ ಗಂಗಾಧರ ಪೂಜಾರ್, ದಾದಾಪೀರ್ ಆರಾಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು.