

ಹುಬ್ಬಳ್ಳಿ: ‘ಮುಂದಿನ ವಾರದಲ್ಲಿ ಕಲಬುರಗಿ, ವಿಜಯಪುರ, ಬಳ್ಳಾರಿ, ಬೆಳಗಾವಿ, ಬಾಗಲಕೋಟೆ ಪ್ರವಾಸ ಮಾಡುತ್ತೇನೆ. ಉತ್ತರ ಕರ್ನಾಟಕದ ಅಸಮಾನತೆ ಬಗ್ಗೆ ಚರ್ಚೆ ಮಾಡುತ್ತೇವೆ. ಈಗಾಗಲೇ ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಬೆಂಬಲ ಸಿಗುತ್ತಿದೆ. ಕಾಂಗ್ರೆಸ್ನ ಬಹಳಷ್ಟು ಮುಖಂಡರು ನನ್ನ ಜತೆ ಬರಲಿದ್ದಾರೆ. ಯಾರ್ಯಾರು ಬರುತ್ತಾರೆ ಎಂದು ಈಗ ಹೇಳಲು ಆಗುವುದಿಲ್ಲ’ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.
ವಿಧಾನಸಭೆ ಮಾಜಿ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಅವರೊಂದಿಗೆ ಇಲ್ಲಿಯ ಖಾಸಗಿ ಹೋಟೆಲ್ನಲ್ಲಿ ಭಾನುವಾರ ಸಂಜೆ ಗಂಟೆಗಟ್ಟಲೆ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಎಸ್.ಆರ್. ಪಾಟೀಲ ಅವರು ತಮ್ಮ ಜತೆ ಬರುತ್ತಾರಾ ಎಂಬ ಪ್ರಶ್ನೆಗೆ, ಕಾದು ನೋಡಿ ಎಂದಷ್ಟೆ ಹೇಳಿದರು.
ಎಸ್.ಆರ್. ಪಾಟೀಲ ಅವರ ಜತೆ ಇಂದಿನ ಮಾತುಕತೆ ನೂರು ಪ್ರತಿಶತ ಯಶಸ್ವಿಯಾಗಿದೆ. ನನಗೆ ಆಗಿರುವ ನೋವಿನ ಬಗ್ಗೆ ಪಾಟೀಲ ಅವರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಅವರ ನೇತೃತ್ವದಲ್ಲಿಯೇ ವಿಜಯಪುರದಲ್ಲಿ ಅಲಿಂಗ (ಅಲ್ಪಸಂಖ್ಯಾತ ಮತ್ತು ಲಿಂಗಾಯತ) ಸಮಾವೇಶ ನಡೆಸಲಿದ್ದೇವೆ. ಇದು ಪಕ್ಷಾತೀತ, ಜಾತ್ಯತೀತ ಸಮಾವೇಶ. ಮಠಾಧೀಶರು, ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಭೇಟಿಗೆ ಯಾರೂ ಹೇಳಿಲ್ಲ: ಸಿ.ಎಂ. ಇಬ್ರಾಹಿಂ ಅವರನ್ನು ಭೇಟಿ ಮಾಡು ಎಂದು ನನಗೆ ಸಿದ್ದರಾಮಯ್ಯ ಅವರಾಗಲಿ, ಡಿ.ಕೆ. ಶಿವಕುಮಾರ ಅವರಾಗಲಿ ಹೇಳಿಲ್ಲ. ಸ್ವಇಚ್ಛೆಯಿಂದ ಅವರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಮುಖಂಡರಿಂದ ಅವರು ನೊಂದುಕೊಂಡಿರುವುದನ್ನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೆ. ನಾವಿಬ್ಬರೂ ಉತ್ತಮ ಸ್ನೇಹಿತರು. ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರಿಯಿರಿ ಎಂದು ಮನವಿ ಮಾಡಿದೆ. ಅದಕ್ಕೆ ಅವರು ಒಪ್ಪಲಿಲ್ಲ ಎಂದು ಎಸ್.ಆರ್. ಪಾಟೀಲ ಹೇಳಿದರು.
ಇಬ್ರಾಹಿಂ ಅವರೊಂದಿಗೆ ನಡೆದ ಮಾತುಕತೆಯ ಎಲ್ಲ ವಿಚಾರಗಳನ್ನು ಮಾಧ್ಯಮದ ಎದುರು ಈಗಲೇ ಹೇಳಲು ಬರುವುದಿಲ್ಲ. ಸಮಯ, ಸಂದರ್ಭ ಬಂದಾಗ ನಿಮಗೆ ತಿಳಿಯುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.