

ಹುಬ್ಬಳ್ಳಿ : ಗಾಯಕ ಸೋನು ನಿಗಮ್ ಅವರು ಕನ್ನಡಿಗರ ವಿರುದ್ಧ ನೀಡಿದ ಹೇಳಿಕೆ ಗಮನಿಸಿದರೆ ಅವರು ಮಾನಸಿಕವಾಗಿ ತೊಂದರೆಗೊಳಗಾಗಿದ್ದಾರೆ ಎಂದೆನಿಸುತ್ತದೆ. ಅವರು ಉತ್ತಮ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು ಎಂದು ಸಂಗೀತ ನಿರ್ದೇಶಕ ಹಾಗೂ ಚಲನಚಿತ್ರ ನಟ ಚಂದನ ಶೆಟ್ಟಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ‘ಸೂತ್ರದಾರ’ ಚಲನಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದನ ಶೆಟ್ಟಿ. ಸೋನು ನಿಗಮ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನೀಡಿದ್ದ ಹೋರಾಟಕ್ಕೆ ಕನ್ನಡ ಚಿತ್ರರಂಗದ ಎಲ್ಲ ಕಲಾವಿದರು ಈಗಾಗಲೇ ಬೆಂಬಲ ಘೋಷಿಸಿದ್ದಾರೆ ಎಂದರು.
ಮೇ 9ರಂದು ರಾಜ್ಯಾದ್ಯಂತ ತೆರೆಕಾಣಲಿರುವ ಸೂತ್ರದಾರ ಚಲನಚಿತ್ರದ ಕುರಿತು ಮಾತನಾಡಿದ ಅವರು, ಮೊದಲ ಬಾರಿಗೆ ಪರಿಪೂರ್ಣ ನಾಯಕ ನಟನಾಗಿ ನಟಿಸಿದ್ದೇನೆ. ರ್ಯಾಪರ್, ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುವುದಕ್ಕೂ, ನಟನಾಗಿ ಕೆಲಸ ಮಾಡುವುದಕ್ಕೂ ವ್ಯತ್ಯಾಸವಿದೆ. ಇದಕ್ಕೂ ಮೊದಲು ಎಲ್ಲಿಯೂ ನಟನೆಯ ತರಬೇತಿ ಪಡೆದಿಲ್ಲ. ಹಾಗಾಗಿ, ಆರಂಭದಲ್ಲಿ ನಟನೆ ಸ್ವಲ್ಪ ಕಷ್ಟಕರವಾಗಿತ್ತು ಎಂದು ತಿಳಿಸಿದರು.
ಸೂತ್ರದಾರ ಚಲನಚಿತ್ರ ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದೇನೆ. ಕೊಲೆಗಾರ ಟಾರ್ಗೆಟ್ ಮಾಡುವವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. ಈ ಕೃತ್ಯವನ್ನು ಬಯಲಿಗೆಳೆಯುವಂತೆ ಹಿರಿಯ ಅಧಿಕಾರಿಗಳು ಸೂಚಿಸುತ್ತಾರೆ ಎಂದು ಚಿತ್ರಕಥೆಯ ಸಾರಾಂಶ ಹೇಳಿದರು.
ನಾಯಕಿ ನಟಿ ಅಪೂರ್ವ ಹಾಗೂ ನಿರ್ಮಾಪಕ ನವರಸನ್ ಮಾತನಾಡಿ, ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಬೆಂಗಳೂರು ಸುತ್ತ ಚಿತ್ರೀಕರಣ ನಡೆದಿದೆ ಎಂದು ತಿಳಿಸಿದರು.