

ಅವಿನಾಶ್ ಜೈನಹಳ್ಳಿ ಮೈಸೂರು
ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಕ್ಷೇತ್ರ ತ್ಯಾಗಕ್ಕೆ ಈಗ ಫಲ ದೊರಕಿದೆ. ಕಾಂಗ್ರೆಸ್ ಪಕ್ಷ ಮೇಲ್ಮನೆಗೆ ಆಯ್ಕೆ ಮಾಡಿರುವ ಅಭ್ಯರ್ಥಿಗಳಲ್ಲಿ ಯತೀಂದ್ರ ಕೂಡ ಒಬ್ಬರಾಗಿದ್ದು, ಗುರುವಾರದಿಂದ ವಿಧಾನಪರಿಷತ್‌ನ ಅಧಿಕೃತ ಸದಸ್ಯರಾಗಿದ್ದಾರೆ. ಅಪ್ಪನಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಅವರು ಈಗ ಎಂಎಲ್‌ಸಿ ಆಗಿದ್ದಾರೆ.
ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದ ಕಾರಣ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಗುರುವಾರ ಪ್ರಕಟಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸ್ಥಾನಗಳು ಖಾಲಿಯಾದ ಸಮಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಮೈಸೂರು ಭಾಗದಲ್ಲಿ ಹಲವಾರು ನಾಯಕರು ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸಿದ್ದರು. ಆದರೆ ಅಂತಿಮವಾಗಿ ಹೈಕಮಾಂಡ್ ಯತೀಂದ್ರ ಅವರ ಕಡೆ ವಾಲಿತು. ಇದಕ್ಕೆ ಪ್ರಮುಖ ಕಾರಣ ಅವರು ’ತಂದೆ’ಗಾಗಿ ಕ್ಷೇತ್ರವನ್ನು ತ್ಯಾಗ ಮಾಡಿದ್ದು. ಕೇವಲ ಕ್ಷೇತ್ರವನ್ನು ತ್ಯಾಗ ಮಾಡಿದ್ದು ಅಲ್ಲದೆ, ವರುಣ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಕಾಲದಿಂದಲೂ ಗೆಲುವಿನ ಅಂತರ 45 ಸಾವಿರ ಮತಗಳ ಆಸುಪಾಸು ದಾಟದೆ ಇರುವಾಗ ಹತ್ತಿರ 59 ಸಾವಿರ ಮತಗಳ ಅಂತರದಲ್ಲಿ ಗೆದ್ದು ಐದು ವರ್ಷ ಆಡಳಿತ ನಡೆಸಿದ ಯತೀಂದ್ರ ಕ್ಷೇತ್ರವನ್ನೂ ಬಿಟ್ಟುಕೊಟ್ಟಿದ್ದರು.
ಅಲ್ಲದೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರೂ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಗೆಲುವಿನ ಅಂತರ 47 ಸಾವಿರದ ಬಳಿಯೂ ಸುಳಿದಿಲ್ಲ. ಹೀಗಾಗಿ ಎಐಸಿಸಿ, ಯತೀಂದ್ರ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಒಲವನ್ನು ವ್ಯಕ್ತಪಡಿಸಿತ್ತು ಎನ್ನಬಹುದು.
ವರುಣ ಕ್ಷೇತ್ರ ‘ಸುರಕ್ಷಿತ’ ಎನ್ನುವುದು ಗೊತ್ತಿದ್ದರೂ ಮಗನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟು 2018ರಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರು. ಚಾಮುಂಡೇಶ್ವರಿಯಲ್ಲಿ ಸೋತರು. ಬಾದಾಮಿಯಲ್ಲಿ ಗೆಲುವು ಗಜಪ್ರಸವದಂತೆ ಇತ್ತು. ಇದರಿಂದ ವಿಚಲಿತಗೊಂಡಿದ್ದ ಸಿದ್ದರಾಮಯ್ಯ, ಭವಿಷ್ಯದಲ್ಲಿ ತಾವು ಆಯಕಟ್ಟಿನ ಸ್ಥಳದಲ್ಲಿ ಇಲ್ಲದೆ ಹೋದರೆ ಮಗನ ಭವಿಷ್ಯ ಕಷ್ಟವಾಗುತ್ತದೆ ಎನ್ನುವುದು ಅರಿತುಕೊಂಡು, 2023ರ ಚುನಾವಣೆಯಲ್ಲಿ ಹಲವಾರು ಕ್ಷೇತ್ರಗಳನ್ನು ಜರಡಿ ಹಿಡಿದು ನೋಡಿದರು. ಆಪಾಯವನ್ನು ಮೈ ಮೇಲೆ ತಂದುಕೊಳ್ಳಬಾರದು ಎಂದು ಮತ್ತೆ ವರುಣದತ್ತ ಮುಖ ಮಾಡಿ, ಅಲ್ಲಿ ನಿಂತು ಗೆದ್ದು, ಮುಖ್ಯಮಂತ್ರಿಯಾದದ್ದೂ ಈಗ ಇತಿಹಾಸ.
ಮೇಲ್ಮನೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾದಾಗ ವರುಣ ಕ್ಷೇತ್ರದ ಜನರು ಅದೇ ಇತಿಹಾಸದ ಪುಟಗಳನ್ನು ತೋರಿಸುತ್ತ ಯತೀಂದ್ರ ಅವರನ್ನು ಎಂಎಲ್‌ಸಿ ಮಾಡಬೇಕು ಎನ್ನುವ ಕೂಗನ್ನು ಹರಿಬಿಟ್ಟರು. ಮೊದಮೊದಲು ಈ ವಿಚಾರವಾಗಿ ನಿರಾಕರಣೆ ಧೋರಣೆಯನ್ನು ಹೊಂದಿದ್ದ ಸಿದ್ದರಾಮಯ್ಯ ಅವರು ಮಗನ ಮೇಲಿನ ವಾಂಛಲ್ಯದಿಂದಾಗಿ ‘ಚೆಂಡನ್ನು’ ಹೈಕಮಾಂಡ್ ಅಂಗಳಕ್ಕೆ ತಳ್ಳಿಬಿಟ್ಟರು.
ಯತೀಂದ್ರ ಅವರಿಗೆ ಸಾಂವಿಧಾನಿಕವಾಗಿ ಹುದ್ದೆ ಇದ್ದರೆ, ಮೈಸೂರು ಭಾಗದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುಕೂಲವಾಗುತ್ತದೆ. ಮುಖ್ಯಮಂತ್ರಿಯಾಗಿರುವುದರಿಂದ ವರುಣ ಕ್ಷೇತ್ರ ಹಾಗೂ ಮೈಸೂರು ಭಾಗದ ಕಡೆ ಸಿದ್ದರಾಮಯ್ಯ ಅವರಿಗೆ ಗಮನಿಸಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಯತೀಂದ್ರ ಅವರನ್ನು ಎಂಎಲ್‌ಸಿಯಾಗಿ ಆಯ್ಕೆ ಮಾಡಿದರೆ ಸಿಎಂನ ಕಣ್ಣಾಗಿ ಕೆಲಸ ಮಾಡುತ್ತಾರೆ ಎನ್ನುವುದು ಕೆಲ ಕಾಂಗ್ರೆಸ್ ಮುಖಂಡರ ವಿಶ್ಲೇಷಣೆ ಕೂಡ ಆಗಿತ್ತು. ಇನ್ನೂ ಕೆಲವರಂತೂ ಎಂಎಲ್‌ಸಿ ಮಾಡುವುದಲ್ಲದೆ ಸಚಿವ ಸ್ಥಾನವನ್ನು ನೀಡಬೇಕು ಎಂದು ಆಗ್ರಹ ಮಾಡಿದ್ದರು. ಇದಕ್ಕೆಲ್ಲ ಉತ್ತರ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಯತೀಂದ್ರ ಅವರನ್ನು ಎಂಎಲ್‌ಸಿ ಮಾಡಿದೆ.
ವರುಣ ವಿಧಾನಸಭಾ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅದೃಷ್ಟದ ಕ್ಷೇತ್ರ ಎಂದೇ ಹೇಳಲಾಗುತ್ತದೆ. ಇದೇ ಕಾರಣಕ್ಕೆ ಯತೀಂದ್ರ ಅಪ್ಪನಿಗೆ ಕ್ಷೇತ್ರ ತ್ಯಾಗ ಮಾಡಿದ್ದರು ಎನ್ನಲಾಗಿತ್ತು. ಮೈಸೂರು, ನಂಜನಗೂಡು ಹಾಗೂ ತಿ.ನರಸೀಪುರ ತಾಲೂಕಿನ ಹಲವು ಗ್ರಾಮಗಳನ್ನು ಒಳಗೊಂಡು 2008ರಲ್ಲಿ ವರುಣ ಕ್ಷೇತ್ರ ಜನ್ಮ ತಾಳಿತು. ಕ್ಷೇತ್ರದಿಂದ ಸಿದ್ದರಾಮಯ್ಯ ಮೂರು ಬಾರಿ ಗೆದ್ದಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಗೆದ್ದಾಗ ಪ್ರತಿಪಕ್ಷದ ನಾಯಕರಾದರೆ, 2013ರಲ್ಲಿ ಎರಡನೇ ಬಾರಿ ಗೆದ್ದಾಗ ಮುಖ್ಯಮಂತ್ರಿಯಾಗಿದ್ದರು. 2018ರಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಈ ಕ್ಷೇತ್ರದಿಂದ ಜಯ ಸಾಧಿಸಿದ್ದರು.
2018ರ ಚುನಾವಣೆಯಲ್ಲಿ ತಮ್ಮ ಅದೃಷ್ಟದ ಕ್ಷೇತ್ರವನ್ನು ತಮ್ಮ ಪುತ್ರನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ, ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆಲುವು ಪಡೆದರು. ಮತ್ತೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು.