ಸೋನಿಯಾ ಗಾಂಧಿ ವಿಚಾರಣೆ ಖಂಡಿಸಿ ಬೀದಿಗಿಳಿದ ಕೊಡಗು ಕಾಂಗ್ರೆಸ್

22mdkj11 - Copy
Published on

ಮಡಿಕೇರಿ: ಜಾರಿ ನಿರ್ದೇಶನಾಲಯದಿಂದ ನಡೆಯುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಚಾರಣೆ ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಶುಕ್ರವಾರ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.


ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾಕಾರರು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ದುರಪಯೋಗ ಪಡಿಸಿಕೊಳ್ಳುತ್ತಿದೆ. ವಿಚಾರಣೆ ನೆಪದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾನಸಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆದಿದೆ ಎಂದು ಟೀಕಿಸಿದರು.


ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ಎಫ್‌ಐಆರ್ ಇಲ್ಲದೆ ಸೋನಿಯಾ ಗಾಂಧಿ ವಿಚಾರಣೆ ನಡೆಸುತ್ತಿರುವುದು ಹಾಸ್ಯಾಸ್ಪದ. ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಇದ್ದ ಸಂದಭ ರಾಹುಲ್ ಗಾಂಧಿ ರಾಜಕಾರಣದಲ್ಲಿ ಇರಲಿಲ್ಲ. ಅವರನ್ನು ಯಾಕಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪ್ರಶ್ನಿಸಿದರು.


ದೇಶದಲ್ಲಿ ಜನ ಬದುಕಲಾಗದ ಸ್ಥಿತಿಯನ್ನು ಬಿಜೆಪಿ ಸೃಷ್ಟಿಸಿದೆ. ಹಿಟ್ಲರ್ ರೀತಿ ಮೋದಿ ನಡೆದುಕೊಳ್ಳುತ್ತಿದ್ದಾರೆ. ನೈತಿಕತೆ ಇದ್ದರೆ ನೇರವಾಗಿ ಚುನಾವಣೆ ಎದುರಿಸಬೇಕು. ಇಡಿ, ಐಟಿಯನ್ನು ಬಿಜೆಪಿ ಬಳಸಿಕೊಂಡು ಕಾಂಗ್ರೆಸ್‌ನಾಯಕರ ಮೇಲೆ ದಾಳಿ ನಡೆಸಿ ಪಕ್ಷಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.


ಯಾವುದೇ ಜನಪರ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿಲ್ಲ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿ ಇರಿಸಿಕೊಂಡು ಆದಾಯ ತೆರಿಗೆ ದಾಳಿ ಮಾಡಿಸುವುದು ಮಾತ್ರ ಬಿಜೆಪಿ ಕೆಲಸ ಎಂದು ವ್ಯಂಗ್ಯವಾಡಿದರು. ದೇಶದಲ್ಲಿ ಬಡವರು, ಶ್ರೀಮಂತ ಎಂದು ವಿಂಗಡಿಸುವ ಕೆಲಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಬಡವರ ಮತದಾನದ ಹಕ್ಕನ್ನು ಕಸಿಯುವ ಸಂಚು ಬಿಜೆಪಿ ಸರ್ಕಾರ ರೂಪಿಸಿದೆ ಎಂದು ಲಕ್ಷ್ಮಣ್ ಆರೋಪಿಸಿದರು.


ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ದೇಶದ ಸ್ವಾತಂತ್ರೃಕ್ಕಾಗಿ ರೂಪುಗೊಂಡ ಪತ್ರಿಕೆ. ನಷ್ಟದ ಹಿನ್ನೆಲೆ ಸಂಸ್ಥೆ ಮುಚ್ಚಲ್ಪಟ್ಟಿತ್ತು. ಇದೀಗ ವಿನಾ ಕಾರಣ ಕಾಂಗ್ರೆಸ್ ನಾಯಕರಿಗೆ ಕಳಂಕ ತರುವ ಉದ್ದೇಶದಿಂದ ಈ ರೀತಿಯ ಸಂಚನ್ನು ಕೇಂದ್ರ ಸರ್ಕಾರ ಮಾಡಿದೆ. ಭ್ರಷ್ಟಾಚಾರ ಆರೋಪ ಹೊತ್ತ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶೀಘ್ರ ಕ್ಲೀನ್ ಚೀಟ್ ಪಡೆದಿದ್ದಾರೆ. ಆದರೆ, ಯಾವುದೇ ತಪ್ಪು ಮಾಡದೆ ಕಾನೂನು ಬಾಹಿರವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಕರೆಸಿ ವಿಚಾರಣೆ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.


ಕಾವೇರಿ ಹಾಗೂ ಕೊಡವರ ಅವಹೇಳನ ಮಾಡಿದ ಪ್ರಕರಣದ ಹಿಂದೆ ಕಾಣದ ಕೈಗಳು ಅಡಗಿವೆ. ಚುನಾವಣೆ ಸಮಯದಲ್ಲಿ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ನಿಟ್ಟಿನಲ್ಲಿ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದರು.


ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಮಾತನಾಡಿ, ಕಾನೂನು ಬಾಹಿರವಾಗಿ ವಿಚಾರಣೆ ನಡೆಯುತ್ತಿದೆ. ರಾಹುಲ್ ಗಂಧಿ ಈ ಪ್ರಕರಣದ ಭಾಗವಾಗಿಲ್ಲ. ಆದರೆ, ಅವರನ್ನು ವಿಚಾರಣೆ ನಡೆಸುತ್ತಿರುವುದರಿಂದ ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಸ್ಪಷ್ಟ ವಾಗುತ್ತದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕೆಂಬ ಬಿಜೆಪಿ ಗುರಿ ಸಾಧಿಸಲು ಈ ರೀತಿಯ ಹುನ್ನಾರಗಳು ನಡೆಯುತ್ತಿರುವುದು ವಿಷಾದನೀಯ ಎಂದರು.


ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷರಾದ ಟಿ.ಪಿ. ರಮೇಶ್, ಕೆ.ಕೆ. ಮಂಜುನಾಥ್‌ಕುಮಾರ್, ಎಂಎಲ್‌ಸಿ ಚುನಾವಣೆ ಪರಾಜಿತ ಅಭ್ಯರ್ಥಿ ಡಾ.ಮಂಥರ್ ಗೌಡ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net