ಮನಸ್ಸು ಬೆಸೆಯುವ ಕೆಎಸ್‌ನ ಗೀತೆ: ಸಾಹಿತಿ ತೈಲೂರು ವೆಂಕಟಕೃಷ್ಣ ಮೆಚ್ಚುಗೆ

Song and Dance Festival Mandya
Published on

ಮಂಡ್ಯ: ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ರಚಿಸಿರುವ ಗೀತೆಗಳು ಜನರ ಮನಸ್ಸನ್ನು ಬೆಸೆಯುವಂತೆ ಮಾಡಿವೆ ಎಂದು ಸಾಹಿತಿ ತೈಲೂರು ವೆಂಕಟಕೃಷ್ಣ ಶ್ಲಾಘಿಸಿದರು.

ನಗರದ ಬಾಲಭವನದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಸ್ವಾಗತಿಸುವ ಕಾರ್ಯಕ್ರಮ ಹಾಗೂ ಕೆ.ಎಸ್.ನ. ಗೀತ ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕೆ.ಎಸ್.ನ ಅವರು ರಚಿಸಿರುವ ಭಾವಗೀತೆ ಕನ್ನಡ ಲೋಕಕ್ಕೆ ನೀಡಿದ ಬಹುದೊಡ್ಡ ಕೊಡುಗೆ. ಸಿನಿಮಾ ಕ್ಷೇತ್ರದಲ್ಲಿಯೂ ಇವರ ಹಾಡುಗಳು ವಿಜೃಂಭಿಸಿವೆ ಎಂದರು.

ಕನ್ನಡ ಸಾರತ್ವ ಲೋಕದಲ್ಲಿ ಭಾವಗೀತೆಗೆ ರಾಗ ಸಂಯೋಜನೆ ಮಾಡಿ ಹಾಡುವುದನ್ನು ನಾವು 50 ವರ್ಷಗಳ ಹಿಂದೆಯೇ ನೋಡಿದ್ದೇವೆ. ಅದೇ ರೀತಿ ಇಲ್ಲಿಯತನಕ ಅದನ್ನು ಉಳಿಸಿಕೊಂಡು ಬಂದಿರುವುದನ್ನು ಈ ಮಂಡ್ಯದಲ್ಲಿ ಕೆ.ಎಸ್.ನ ಅವರ ಕಾರ್ಯಕ್ರಮದ ಮೂಲಕ ಕಾಣಬಹುದು. ಆದರೆ ಭಾವಗೀತೆಗೆ ಅದರದೇ ಆದ ಶಕ್ತಿ ಇದೆ. ಅದನ್ನು ನೋಡುವ ಮನೋಭಾವ ಎಲ್ಲರಲ್ಲಿಯೂ ಇರಬೇಕು ಎಂದು ಸಲಹೆ ನೀಡಿದರು.

ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಹಾಡುಗಾರರಿಗೆ ಅವಕಾಶ ಸಿಗಬೇಕೆಂಬುದರ ಬಗ್ಗೆಯೇ ಚಿಂತೆಯಾಗಿರುತ್ತದೆ. ಕೆಲವು ಕಲಾವಿದರು ಬೀದಿಬೀದಿಯಲ್ಲಿ ಅವಕಾಶಕ್ಕಾಗಿ ಅಲೆದಾಡುವುದನ್ನು ನೋಡಿದ್ದೇವೆ. ಆದರೆ ಪ್ರತಿಯೊಂದು ವೇದಿಕೆಯಲ್ಲಿಯೂ ಸ್ಥಳೀಯ ಕಲಾವಿದರನ್ನು ಗುರುತಿಸಿ ಅವಕಾಶ ನೀಡಲು ಇಂತಹ ಕಾರ್ಯಕ್ರಮಗಳನ್ನು ಮಾಡಿಕೊಂಡು ಪ್ರೋತ್ಸಾಹಿಸುವ ಕೆಲಸವನ್ನು ನಮ್ಮ ಟ್ರಸ್ಟ್‌ವತಿಯಿಂದ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಬಿ.ವಿ.ನಂದೀಶ್ ಮಾತನಾಡಿ, ಈ ಭಾಗದ ಕಲೆ, ಸಂಸ್ಕೃತಿಯನ್ನು ತಿಳಿಸುವ ಕೆಲಸನವನ್ನು ಕೆ.ಎಸ್.ನರಸಿಂಹಸ್ವಾಮಿ ಅವರ ನೆನಪಿನ ಕಾರ್ಯಕ್ರಮದ ಮೂಲಕ ಮಾಡುತ್ತಿದ್ದೇವೆ. ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನಕ್ಕೆಂದು ಕನ್ನಡಾಭಿಮಾನಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಸಂಗೀತದ ರಸದೌತಣ ನೀಡುವ ಕೆಲಸವನ್ನು ನಮ್ಮ ಹಾಡುಗಾರರು ಮಾಡುತ್ತಿದ್ದಾರೆ, ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಮತ್ತು ಕಲಾಸಕ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯೆ ಮಂಜುಳಾ ಉದಯಶಂಕರ್, ಜಾನಪದ ಗಾಯಕ ಗೊರವಾಲೆ ಚಂದ್ರಶೇಖರ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ತೃತೆ ಬಿ.ಎಸ್.ಅನುಪಮಾ, ಗಾಯಕರಾದ ಶ್ರೀನಿವಾಸ ಉಡುಪ, ಪ್ರತಿಭಾಂಜಲಿ ಡೇವಿಡ್, ಶ್ರೀಧರ್, ಸಿ.ಪಿ.ವಿದ್ಯಾಶಂಕರ್, ಇಂದಿರಾಮಯ್ಯ, ದಿಶಾ ಜೈನ್, ಗಾಮನಹಳ್ಳಿ ಸ್ವಾಮಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net