

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಶಿಷ್ಯ ಸ್ವೀಕಾರದ ಸಾಂಪ್ರದಾಯಿಕ ಪ್ರಕ್ರಿಯೆಗಳಿಗೆ ಚಾಲನೆ ದೊರಕಿದೆ.
ಜ.18 ರಿಂದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿ ಜ.22 ರವರೆಗೆ ಜರುಗಲಿವೆ. ಅದಕ್ಕೂ ಪೂರ್ವದ ಕೆಲ ಧಾರ್ಮಿಕ ಹಾಗೂ ಪರಂಪರೆಯ ಪ್ರಕ್ರಿಯೆಗಳು ಮಂಗಳವಾರ ನಡೆದವು. ಯಲ್ಲಾಪುರದ ಈರಾಪುರ ಗಂಗೆಮನೆಯ ವಿದ್ವಾನ್ ನಾಗರಾಜ ಭಟ್ಟ ಅವರನ್ನು ಶಿಷ್ಯರಾಗಿ ಸ್ವೀಕರಿಸಲು ಗಂಗಾಧರೇಂದ್ರ ಸ್ವಾಮಿಗಳು ನಿರ್ಧರಿಸಿದ್ದಾರೆ.
ಮಠದ ಉಪಾದಿವಂತರು, ಆಡಳಿತ ಸಮಿತಿಯವರು ನಿಯೋಜಿತ ಉತ್ತರಾಧಿಕಾರಿ ವಿದ್ವಾನ್ ನಾಗರಾಜ ಭಟ್ಟ ಅವರ ಮನೆಗೆ ತೆರಳಿ ಸಂಪ್ರದಾಯದಂತೆ ಗೌರವ ಸಲ್ಲಿಸಿದರು. ನಂತರ ನಾಗರಾಜ ಭಟ್ಟರ ಕುಟುಂಬದವರು ಮಠಕ್ಕೆ ಆಗಮಿಸಿ ಶ್ರೀಗಳ ಪಾದ ಪೂಜೆ ನೆರವೇರಿಸಿ, ಭಿಕ್ಷಾ ವಂದನೆ ಸಲ್ಲಿಸಿದರು.
ನಾಗರಾಜ ಭಟ್ಟರ ತಂದೆ ಗಣಪತಿ ಭಟ್ಟ ಹಾಗೂ ತಾಯಿ ಭುವನೇಶ್ವರಿ ಹಾಗೂ ಮನೆಯ ಇತರ ಸದಸ್ಯರು ಇದ್ದರು.
23 ರ ವಯೋಮಾನದ ನಾಗರಾಜ ಭಟ್ಟರು ಕಳೆದ ಒಂದು ದಶಕಗಳಿಂದ ಮನೆಯಲ್ಲೇ ಇದ್ದು ವೇದ ಅಧ್ಯಯನ ಮಾಡುತ್ತಿದ್ದು, ಇದೀಗ ವೇದಾಂತ ಶಾಸ್ತ್ರ ಅಧ್ಯಯನ ಮಾಡುತ್ತಿದ್ದಾರೆ.